ಕೊರೋನ ನಿಯಮ ಉಲ್ಲಂಘಿಸಿ ಪಾದಯಾತ್ರೆ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧದ ಚಾರ್ಜ್ ಶೀಟ್ ಗೆ ತಡೆ

Update: 2022-06-28 15:55 GMT
ಫೈಲ್ ಚಿತ್ರ

ಬೆಂಗಳೂರು, ಜೂ.28: ಕೊರೋನ ನಿಯಮಾವಳಿ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ನಡೆಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣದಡಿ ಹಾಕಿದ್ದ ಚಾರ್ಜ್ ಶೀಟ್ ಗೆ ತಡೆ ನೀಡಿದೆ. 

ಇದರಿಂದ, ಸಿದ್ದರಾಮಯ್ಯ ಮತ್ತು ಡಿಕೆಶಿ ಜತೆ ಕಾಂಗ್ರೆಸ್‌ನ ಒಟ್ಟು 13 ನಾಯಕರಿಗೆ ಹೈಕೋರ್ಟ್ ನ್ಯಾಯಪೀಠದಿಂದ ತಾತ್ಕಾಲಿಕ ರಿಲೀಫ್ ದೊರಕಿದೆ. 

ಕೊರೋನ ಸೋಂಕು ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಜನವರಿಯಲ್ಲಿ ಸರಕಾರ ಕೆಲ ನಿಯಮಗಳನ್ನು ಜಾರಿಗೊಳಿಸಿತ್ತು. ಆದರೂ ನಿಯಮಗಳನ್ನು ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ಮಾಡಿದ್ದರು. ಹೀಗಾಗಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಸೇರಿ ಹಲವು ಕಾಂಗ್ರೆಸ್ ಮುಖಂಡರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. 

ಹೈಕೋರ್ಟ್ ನಲ್ಲಿ ಕಾಂಗ್ರೆಸ್ ಮುಖಂಡರ ಪರ ವಾದಿಸಿದ ವಕೀಲರು, ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ ಅನ್ವಯಿಸಬೇಕಿತ್ತು. ಆದರೆ, ಎಪಿಡೆಮಿಕ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಎಪಿಡೆಮಿಕ್ ಡಿಸೀಸ್ ಕಾಯ್ದೆಯಡಿ ಕೊರೋನ ಅಧಿಸೂಚನೆಯಾಗಿಲ್ಲ. ಅಲ್ಲದೆ, ಸರಕಾರ ಕಾಂಗ್ರೆಸ್ ಪಕ್ಷದ ವಿರುದ್ಧ ತಾರತಮ್ಯ ಎಸಗಿದೆ. ಹೀಗಾಗಿ, ಕಾಯ್ದೆ ಅನ್ವಯಿಸಿರುವುದು ಕಾನೂನು ಬಾಹಿರವೆಂದು ವಾದ ಮಂಡಿಸಿದ್ದರು. 

ವಕೀಲರ ವಾದ ಆಲಿಸಿದ ನ್ಯಾಯಪೀಠ, ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಪ್ರಕರಣದಡಿ ಹಾಕಿದ್ದ ಚಾರ್ಜ್ ಶೀಟ್ ಗೆ ತಡೆ ನೀಡಿದೆ. ಇದರಿಂದ, ಸಿದ್ದರಾಮಯ್ಯ, ಡಿಕೆಶಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News