ಉ.ಕ ಪ್ರತ್ಯೇಕ ರಾಜ್ಯ; ಸಚಿವ ಕತ್ತಿ ಹೇಳಿಕೆಗೆ ಕಸಾಪ ಖಂಡನೆ

Update: 2022-06-28 16:06 GMT

ಬೆಂಗಳೂರು, ಜೂ.28: ರಾಜ್ಯ ಪ್ರತ್ಯೇಕತೆ ಬಗ್ಗೆ ಮಾತನಾಡಿ ಕನ್ನಡಿಗರ ಮಧ್ಯೆ ಗೊಂದಲ ಸೃಷ್ಟಿಸಿದ ಸಚಿವ ಉಮೇಶ ಕತ್ತಿ ಅವರ ಹೇಳಿಕೆಯನ್ನು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ ಡಾ.ಮಹೇಶ ಜೋಶಿ ಕಟುವಾಗಿ ಖಂಡಿಸಿದ್ದಾರೆ. 

ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿಸುವ ಕುರಿತು ಸ್ವಾರ್ಥ ಹಾಗೂ ಸ್ವಹಿತಾಸಕ್ತಿ ಹಿನ್ನೆಲೆಯಲ್ಲಿ ಸಚಿವ ಉಮೇಶ ಕತ್ತಿಯವರು ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಇದರಿಂದ, ರಾಜ್ಯದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಲು ಕಾರಣವಾಗುತ್ತಿದೆ ಎಂದು ಜೋಶಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.   

ಸರಕಾರ ಅವರಿಗೆ ಅರಣ್ಯ ಇಲಾಖೆಯನ್ನು ನೀಡಿದೆ. ಅದರಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಬದಲು ಕನ್ನಡಿಗರಲ್ಲಿ ಪ್ರತ್ಯೇಕ ರಾಜ್ಯದ ಕಿಚ್ಚು ಹಚ್ಚುತ್ತಿರುವ ಇವರ ಹೇಳಿಕೆಗಳು ಖಂಡನೀಯ ಎಂದು ಹೇಳಿದ್ದಾರೆ. 

ಕನ್ನಡ ನಾಡಿನ ಏಕೀಕರಣ ಸಂದರ್ಭದಲ್ಲಿ ಕನ್ನಡ ನೆಲಕ್ಕಾಗಿ ಅನೇಕ ಮಹನೀಯರು ಹೋರಾಟದಲ್ಲಿ ಪಾಲ್ಗೊಂಡು ನಾಡು ಒಂದಾಗಲು ಶ್ರಮಿಸಿದ್ದಾರೆ. ಅವರ ಹೋರಾಟ, ತ್ಯಾಗ, ಶ್ರಮದ ಫಲವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಯಿತು. ಹೀಗೆ ಒಂದಾಗಿರುವ ಕನ್ನಡ ನೆಲ ಒಡೆಯುವ ಮಾತನ್ನು ಕಸಾಪ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.  

ಕನ್ನಡಿಗರೇ ಹೆಚ್ಚಾಗಿರುವ ಇನ್ನೂ ಹಲವು ಪ್ರದೇಶಗಳು ನೆರೆಯ ರಾಜ್ಯಗಳಲ್ಲಿ ಉಳಿದುಕೊಂಡಿವೆ. ಅವುಗಳನ್ನು ಕರ್ನಾಟಕಕ್ಕೆ ವಿಲೀನಗೊಳಿಸುವ ಇಚ್ಛಾಶಕ್ತಿಯನ್ನು ಕತ್ತಿಯವರು ಪ್ರಕಟಿಸಬೇಕಿತ್ತು. ಇವರ ಸ್ವಕ್ಷೇತ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರ ಅಟ್ಟಹಾಸವನ್ನು ಮಟ್ಟಹಾಕುವ ಧ್ವನಿ ಎತ್ತುವ ಬದಲು ಪ್ರತ್ಯೇಕತೆಯ ಸ್ವರ ಎಬ್ಬಿಸುತ್ತಿದ್ದಾರೆ. `ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದುʼ ಎಂಬ ಸದಾಶಯದ ನುಡಿಯ ವಿಭಜನೆಗಾಗಿ ಕತ್ತಿ ಮಸೆಯುತ್ತ ಕಿಡಿ ಹಚ್ಚುವ ಕತ್ತಿಯವರ ನಡೆ ಸರಿಯಲ್ಲ ಎಂದರು. 

ಕನ್ನಡ ನಾಡು-ನುಡಿ ಕಟ್ಟುವ ನಿರಂತರ ಕಾಯಕದಲ್ಲಿ ಹಾಗೂ ಅದರ ಅಖಂಡತೆ ಕಾಪಾಡುವಲ್ಲಿ 107 ವರ್ಷಗಳ ಇತಿಹಾಸ ಹೊಂದಿರುವ, ಕನ್ನಡ ಸಾಹಿತ್ಯ ಪರಿಷತ್ತು ಸದಾ ಬದ್ಧವಾಗಿದೆ ಎಂದು ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News