ಮಡಿಕೇರಿ | ವೇತನವಿಲ್ಲದೆ ಅಂಗನವಾಡಿ ಕಾರ್ಯಕರ್ತೆಯರ ಪರದಾಟ; ರಿಚಾರ್ಜ್ ಮಾಡದೆ ಮೊಬೈಲ್ ಸೇವೆ ಕೂಡ ಸ್ಥಗಿತ

Update: 2022-06-28 16:34 GMT
ಸಾಂದರ್ಭಿಕ ಚಿತ್ರ

ಮಡಿಕೇರಿ ಜೂ.28 : ರಾಜ್ಯವ್ಯಾಪಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಧ ಸೇವೆಗಳಿಗೆ ಸಂಬಂಧಿಸಿದ ಮೊಬೈಲ್ ಗೆ ಸರಕಾರ ರಿಚಾರ್ಜ್ ಮಾಡದೆ ಇರುವುದರಿಂದ ಇದು ಕೂಡ ಸ್ಥಗಿತಗೊಂಡಿದೆ.

ಕೊಡಗು ಜಿಲ್ಲೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ವೇತನವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಕಚೇರಿಯಲ್ಲಿ ಕೇಳಿದರೆ ವೇತನ ಪಾವತಿ ಮಾಡುವ ವಿಧಾನ ಬದಲಾಗಿದೆಯೆಂದು ಹೇಳುತ್ತಿದ್ದಾರೆ. ಆದರೆ ಅನುದಾನದ ಕೊರತೆಯೇ ವೇತನ ಪಾವತಿಯಾಗದೆ ಇರುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ವೇತನ ಮಾತ್ರವಲ್ಲದೆ ಕೋಳಿಮೊಟ್ಟೆ ಮತ್ತು ಇತರ ವಸ್ತುಗಳಿಗೆ ಖರ್ಚು ಮಾಡಿದ ಹಣ ಕೂಡ ಬರಬೇಕಾಗಿದೆ. ನೀಡುವ ಅಲ್ಪ ಗೌರವಧನವನ್ನು ನಿಗಧಿತ ಸಮಯದಲ್ಲಿ ನೀಡುತ್ತಿಲ್ಲ. ಪ್ರಶ್ನಿಸಿದರೆ ಇಂದು, ನಾಳೆ ಎಂದು ದಿನ ಕಳೆಯುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ಅಂಗನವಾಡಿ ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 

ಕೋವಿಡ್ ಸಂದಿಗ್ಧ ಪರಿಸ್ಥಿತಿಯ ಸಂದರ್ಭ ಕಾರ್ಯಕರ್ತರು ಹಾಗೂ ಸಹಾಯಕಿಯರು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಕಾಡಾನೆ, ಹುಲಿ ದಾಳಿಯ ಆತಂಕದ ನಡುವೆ ಜೀವದ ಹಂಗು ತೊರೆದು ಮಳೆ, ಗಾಳಿ, ಚಳಿ ಎನ್ನದೆ ಮನೆ ಮನೆಗಳಿಗೆ ಭೇಟಿ ನೀಡಿ ಸರಕಾರದ ಸೌಲಭ್ಯಗಳನ್ನು ಮಹಿಳೆಯರು ಹಾಗೂ ಮಕ್ಕಳಿಗೆ ತಲುಪಿಸುತ್ತಿದ್ದಾರೆ. ಆದರೂ ಸರಕಾರ ಅಂಗನವಾಡಿ ಸಿಬ್ಬಂದಿಗಳ ಬಗ್ಗೆ ಕರುಣೆ ತೋರುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. 

ಮೊಬೈಲ್‍ಗಳಿಗೆ ರಿಚಾರ್ಜ್ ಮಾಡಿಲ್ಲ

ಸ್ಥಳೀಯ ಮಾಹಿತಿಗಳ ವರದಿಯನ್ನು ಮೊಬೈಲ್ ಮೂಲಕ ಸರಕಾರಕ್ಕೆ ಸಲ್ಲಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್‍ಗಳನ್ನು ನೀಡಲಾಗಿತ್ತು. ಅಲ್ಲದೆ ಇಲಾಖೆಯಿಂದಲೇ ಮೊಬೈಲ್‍ಗಳಿಗೆ ರಿಚಾರ್ಜ್ ಮಾಡಲಾಗುತ್ತಿತ್ತು. ನಿತ್ಯ ಮಕ್ಕಳ ಹಾಜರಾತಿ, ಬಾಣಂತಿಯರ ಆರೋಗ್ಯದ ಸ್ಥಿತಿ, ಮಕ್ಕಳ ತೂಕ, ಆಹಾರದ ಕ್ರಮ, ಗ್ರಾಮದಲ್ಲಿ ಶಿಶು ಮರಣ, ಬಾಣಂತಿ ಹಾಗೂ ಪ್ರತಿ ತಿಂಗಳು ಹುಟ್ಟಿದ ಮಗುವಿನ ಆರೋಗ್ಯದ ಸ್ಥಿತಿಗತಿಗಳು ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳ ಮಾಹಿತಿಯನ್ನು ಮೊಬೈಲ್ ಮೂಲಕ ಸರಕಾರಕ್ಕೆ ನೀಡಲಾಗುತ್ತಿತ್ತು.   

ಆದರೆ ಕಳೆದ 3 ತಿಂಗಳಿನಿಂದ ರಿಚಾರ್ಜ್ ಮಾಡದೆ ಇರುವುದರಿಂದ ಮೊಬೈಲ್ ಸೇವೆ ಸ್ಥಗಿತಗೊಂಡಿದೆ. ಕಾರ್ಯಕರ್ತರೇ ಸ್ವತಃ ರಿಚಾರ್ಜ್ ಮಾಡಿ ಸರಕಾರಕ್ಕೆ ಮಾಹಿತಿ ಒದಗಿಸಬೇಕಾಗಿದೆ. ವೇತನ ವಿಳಂಬದ ಜೊತೆಗೆ ಈ ಆರ್ಥಿಕ ಹೊರೆಯೂ ಇವರ ಮೇಲೆ ಬಿದ್ದಿದೆ.


 ::: ಹಣ ಬಿಡುಗಡೆಯಾಗಿದೆ :::  

ಈಗಾಗಲೇ ಸರಕಾರದಿಂದ ಹಣ ಬಿಡುಗಡೆಯಾಗಿದ್ದು, ಕೆಲವು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಒಂದು ತಿಂಗಳ ವೇತನವನ್ನು ನೀಡಲಾಗಿದೆ. ಉಳಿದ ವೇತನ ಶೀಘ್ರದಲ್ಲಿ ನೀಡಲಾಗುವುದು. ಸರಕಾರದಿಂದಲೇ ಕಾರ್ಯಕರ್ತೆಯರ ಮೊಬೈಲ್‍ಗಳಿಗೆ ರಿಚಾರ್ಜ್ ವ್ಯವಸ್ಥೆ ಆಗುತ್ತಿದ್ದು, ಇತ್ತೀಚೆಗೆ ರಾಜ್ಯದ ಯಾವುದೇ ಕಾರ್ಯಕರ್ತರ ಮೊಬೈಲ್‍ಗೆ ರಿಚಾರ್ಜ್ ಆಗಿರುವುದಿಲ್ಲ. ಈ ಬಗ್ಗೆ ಸರಕಾರವೇ ಕ್ರಮ ಕೈಗೊಳ್ಳಬೇಕು

(ಮಂಜುನಾಥ್, ಉಪನಿರ್ದೇಶಕರು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ)  


::: ಹೋರಾಟದ ಎಚ್ಚರಿಕೆ :::

ಹೊಸ ತಂತ್ರಾಂಶದಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಂಕಷ್ಟ ಎದುರಿಸುವಂತಾಗಿದೆ. ಹೋರಾಟದ ಎಚ್ಚರಿಕೆ ನೀಡಿದ ಹಿನ್ನೆಲೆ ಒಂದು ತಿಂಗಳ ವೇತನ ಖಾತೆಗೆ ಬಂದಿದೆ. ಇನ್ನು ಒಂದು ತಿಂಗಳ ಒಳಗಾಗಿ ಪೂರ್ಣಪ್ರಮಾಣದ ವೇತನ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

(ಕೆ.ಪಿ.ಕಾವೇರಮ್ಮ, ಜಿಲ್ಲಾಧ್ಯಕ್ಷೆ, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಸಂಘ) 


ಕಳೆದ ಮೂರು ತಿಂಗಳಿನಿಂದ ಮೊಬೈಲ್‍ಗೆ ರಿಜಾರ್ಚ್ ಮಾಡಿಲ್ಲ. ಕಾರ್ಯಕರ್ತರೇ ರಿಜಾರ್ಚ್ ಮಾಡಿಕೊಂಡು ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದ್ದು, ಅದರಂತೆ ಕಾರ್ಯನಿರ್ವಹಿಸಲಾಗಿತ್ತು. ಇದೀಗ 3 ತಿಂಗಳು ಕಳೆದಿದ್ದು, ವೇತನದ ಜೊತೆಗೆ ಮೊಬೈಲ್ ರಿಚಾರ್ಜ್ ಮಾಡಲು ಹಣವಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

(ಮುತ್ತಮ್ಮ, ಅಧ್ಯಕ್ಷರು, ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿರ ಸಂಘ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News