ಉದಯಪುರದಲ್ಲಿ ಇಬ್ಬರು ಮತಾಂಧರು ಎಸಗಿದ ಕೃತ್ಯ ಹೀನ ಕ್ರೌರ್ಯ : ರಹಮತ್ ತರೀಕೆರೆ

Update: 2022-06-28 18:07 GMT
RahamathTarikere/Facebook

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡುಹಗಲಿನಲ್ಲೇ ವ್ಯಕ್ತಿಯೋರ್ವನನ್ನು ಹತ್ಯೆಗೈದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರವಾದಿ ಮಹಮ್ಮದ್‌ ಕುರಿತು ನಿಂದನಾತ್ಮಕ ಹೇಳಿಕೆ ನೀಡಿದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾರನ್ನು ಬೆಂಬಲಿಸಿದಕ್ಕಾಗಿ ಈ ದುಷ್ಕೃತ್ಯ ನಡೆದಿದೆ ಎಂದು ವರದಿಯಾಗಿದೆ. ಈ ಹತ್ಯೆಯ ಕುರಿತು ಸಾಹಿತಿಗಳು, ಬುದ್ಧಿಜೀವಿಗಳು ಖಂಡನೆ ವ್ಯಕ್ತಪಡಿಸಿದ್ದು, ಕೊಲೆಗಾರರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ ಮೂಲಕ ಪ್ರತಿಕ್ರಿಯಿಸಿರುವ ಕನ್ನಡದ ಹಿರಿಯ ಚಿಂತಕ ರಹಮತ್‌ ತರೀಕೆರೆ ಅವರು ಉದಯಪುರದಲ್ಲಿ ಇಬ್ಬರು ಮತಾಂಧರು ಎಸಗಿದ ಕೃತ್ಯ ಹೀನ ಕ್ರೌರ್ಯ ಎಂದು ಹೇಳಿದ್ದಾರೆ.

“ಉದಯಪುರದಲ್ಲಿ ಇಬ್ಬರು ಮತಾಂಧರು ಎಸಗಿರುವ ಕೃತ್ಯವು ಹೀನಕ್ರೌರ್ಯವಾಗಿದೆ. ಅದನ್ನು ಎಲ್ಲರೂ  ಖಂಡಿಸಬೇಕಿದೆ. ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಲಿ.  ಎಷ್ಟೇ ಸಮಸ್ಯೆಯಿದ್ದರೂ, ಎಷ್ಟೇ  ಸೋಲಾದರೂ, ಡೆಮಾಕ್ರಟಿಕ್ಕಾದ ಮತ್ತು ಕಾನೂನುಬದ್ಧ ಹಾದಿಗಳಲ್ಲಿಯೇ ಭಿನ್ನಮತ ಮತ್ತು ಪ್ರತಿರೋಧ ಪ್ರಕಟವಾಗಬೇಕು. ಆವೇಶದ ಹಾದಿಗಳು ಆತ್ಮಹತ್ಯಾತ್ಮಕ. ಎಲ್ಲ ಧರ್ಮಗಳ ಮತಾಂಧತೆ ಮೂಲಭೂತವಾದ ಮತೀಯವಾದಗಳು  ನಮ್ಮ ಶಾಪಗಳಾಗಿವೆ. ಇವು ದೇಶವನ್ನು ದಿನೇದಿನೇ ಅಮಾನುಷತೆಗೆ ಅಧಃಪತನಕ್ಕೆ ತಳ್ಳುತ್ತಿವೆ. ಸುರಂಗದ ಹಾದಿಯ ಕೊನೆಯಲ್ಲಿ ಬೆಳಕು ಕಾಣಬೇಕು. ಆದರೆ ಕರಾಳ ಕತ್ತಲೆಯೇ ಕಾಣುತ್ತಿದೆ.” ಎಂದು ಪ್ರೊ. ರಹಮತ್‌ ತರೀಕೆರೆ ಬರೆದಿದ್ದಾರೆ.

“ರಾಜಸ್ತಾನದ ಉದಯಪುರದಲ್ಲಿ ನೂಪುರ್ ಶರ್ಮಾರನ್ಬು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಟೈಲರ್ ಒಬ್ಬನನ್ನು ಇಬ್ಬರು ಕತ್ತು ಕತ್ತರಿಸಿ ಕೊಲೆಗೈದ ಪ್ರಕರಣ ವರದಿಯಾಗಿದೆ. ಇದೊಂದು ಹೇಯ ಕೃತ್ಯ ಅತ್ಯುಗ್ರ ಶಬ್ದಗಳಲ್ಲಿ ಖಂಡಿಸಬೇಕಾದ ಅಮಾನವೀಯ ಕೃತ್ಯ. ಈ ಆರೋಪಿಗಳು ಪ್ರಧಾನಿಯವರ ಬಗ್ಗೆಯೂ ಬೆದರಿಕೆ ಹಾಕಿದ್ದಾಗಿ ವರದಿಯಲ್ಲಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ( ಈಗಾಗಲೆ ನಾವು ಭಯೋತ್ಪಾದಕರಿಂದಾಗಿ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನು ಮರೆಯಬಾರದು.)

ಈ ಆರೋಪಿಗಳನ್ನು ತಕ್ಷಣ ಬಂಧಿಸಿ ಶೀಘ್ರ ಗತಿಯ ತನಿಖೆ ನಡೆಸಿ ಕಠಿಣ ಶಿಕ್ಷ ವಿಧಿಸಬೇಕಿದೆ. ನೂಪುರ್ ಶರ್ಮಾ ವಿರುದ್ಧ ದಾಖಲಾದ ಪ್ರವಾದಿ ನಿಂದನೆಯ ಎಫ್ ಐ ಆರ್ ಪ್ರಕರಣದ ಬಗ್ಗೆಯೂ ಪೊಲೀಸರು ಕ್ಷಿಪ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.

ಧರ್ಮನಿಂದನೆಯ ಯಾವ ಆರೋಪವೇ ಇರಲಿ, ಪ್ರತೀಕಾರವಾಗಿ ಹಿಂಸೆ, ಕೊಲೆ ನಡೆಸುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಯಾರಿಗೂ ಇನ್ನೊಬ್ಬ ಮನುಷ್ಯನ ಪ್ರಾಣ ತೆಗೆಯುವ ಅಧಿಕಾರ ಇಲ್ಲ. "ಒಬ್ಬ ಮನುಷ್ಯನನ್ನು ಕೊಲೆಗೈದರೆ ಇಡೀ ಮನುಕುಲವನ್ಬು ಕೊಲೆಗೈದಂತೆ" ಎಂದು ಸ್ವತಃ ಪೈಗಂಬರರ ವಚನವೇ ಇದೆ. ದೇಶದಲ್ಲಿ ಧರ್ಮಗಳ ಮಧ್ಯೆ ಕಲಹ ಉಂಟು ಮಾಡುವ ಸಂಚುಗಳ ಬಗ್ಗೆ ಪ್ರತಿ ರಾಜ್ಯ ಸರಕಾರಗಳೂ ಕಟ್ಟೆಚ್ಚರ ವಹಿಸಬೇಕಿದೆ. ಕೊರೊನಾದ ಆರ್ಥಿಕ ಹೊಡೆತದಿಂದ ದೇಶ ಇನ್ನೂ ಚೇತರಿಸಿಕೊಳ್ಳಬೇಕಿದೆ. ಈಗ ಬೇಕಾಗಿರುವುದು ಶಾಂತಿ ಮತ್ತು ಸೌಹಾರ್ದ ವಾತಾವರಣ. ಅದಿದ್ದರೆ ದೇಶದಲ್ಲಿ ಮತ್ತೆ ಆರ್ಥಿಕ ಚೇತರಿಕೆ ಉಂಟಾಗಿ ಪ್ರಗತಿ ಸಾಧಿಸಬಹುದು. ವಿವಿಧ ಧರ್ಮಗುರುಗಳು, ಧಾರ್ಮಿಕ ಮುಖಂಡರು, ಮಠಾಧೀಶರು, ಸ್ವಾಮೀಜಿಗಳು ಈ ನಿಟ್ಟಿನಲ್ಲಿ ಒಂದಾಗಿ ಚಿಂತಿಸಬೇಕಿದೆ.” ಎಂದು ಹಿರಿಯ ಪತ್ರಕರ್ತ ಬಿ ಎಂ ಹನೀಫ್‌ ಅವರು ಬರೆದಿದ್ದಾರೆ.


“ಉದಯಪುರದಲ್ಲಿ ಇಬ್ಬರು ಮುಸ್ಲಿಮರೆಂದು ಹೇಳಿಕೊಂಡವರು ನಡೆಸಿದ ಟೈಲರ್ ಒಬ್ಬರ ಬರ್ಬರ ಹತ್ಯೆ ಖಂಡಿತವಾಗಿ ಒಂದು ಟೆರ್ರರಿಸ್ಟ್ ಕೃತ್ಯ‌. ಯಾವುದೆ ನೆಪವನ್ನು ಮುಂದೆ ಮಾಡದೆ, ಎಲ್ಲಾ ಮುಸ್ಲಿಮರು ಈ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಲೇಬೇಕು. ಇಂಥವರಿಂದಲೆ ಇಸ್ಲಾಂ ಧರ್ಮಕ್ಕೆ ಕುಖ್ಯಾತಿ ಬಂದಿರುವುದು” ಎಂದು ವ್ಯಂಗ್ಯಚಿತ್ರಕಾರಾದ  ಪಿ. ಮಹಮ್ಮದ್ ಬರೆದಿದ್ದಾರೆ.

“ಉದಯಪುರದ ಹತ್ಯೆ ಪ್ರಕರಣ ಖಂಡನೀಯ, ಆರೋಪಿತರಿಗೆ ಕಠಿಣ ಶಿಕ್ಷೆ ಆಗಬೇಕು. ಇಂತಹ ಘಟನೆಗಳಿಗೆ ಪ್ರಚೋದನೆ ಕೊಡುವುದೂ ನಿಲ್ಲಬೇಕು. ಹಿಂಸೆಯನ್ನು ಮತ್ತು ಅಪರಾಧಿಗಳನ್ನು ಹುಟ್ಟು ಹಾಕುವ ರಾಜಕೀಯಕ್ಕೂ ಮೂಲಭೂತವಾದಕ್ಕೂ ನನ್ನ ಧಿಕ್ಕಾರವಿದೆ.” ಎಂದು ಪತ್ರಕರ್ತ ಇಮಾಂ ಗೋಡೇಕಾರ್‌ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಯುವ ಲೇಖಕಿ ಫಾತಿಮಾ ರಳಿಯಾ ಹೆಜಮಾಡಿ, “ಹಿಂಸೆಗೆ ಪ್ರತಿ ಹಿಂಸೆ ಯಾವತ್ತೂ ಪರಿಹಾರವಲ್ಲ. ಉದಯಪುರದ ಕೊಲೆಯಲ್ಲಿ ಪ್ರತೀಕಾರವನ್ನೇ ಪ್ರತಿರೋಧ ಎಂದು ಗ್ರಹಿಸಿಕೊಂಡವರ ಪಾಲು ದೊಡ್ಡದು. ಹಾಗಾಗಿರದಿದ್ದರೆ, ಹೀಗಾಗಿರದಿದ್ದರೆ ಎನ್ನುವ ಯಾವ ಕಾರಣಗಳನ್ನೂ ನೀಡದೆ ಈ ಕೊಲೆಯನ್ನು ಖಂಡಿಸಬೇಕು” ಎಂದು ಬರೆದಿದ್ದಾರೆ.

“ಈ ಕೊಲೆಗಳನ್ನು ಕಂಡು ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಖೇದ ಪಡುವ ವ್ಯಕ್ತಿಯಿದ್ದರೆ ಅದು ಕರುಣೆಯ ಪ್ರವಾದಿ ಪೈಗಂಬರ್ ﷺ ಆಗಿರಬಹುದು. ಪ್ರತಿಕಾರ ಧರ್ಮದಲ್ಲಿದ್ದಿದ್ದರೆ ಕುತ್ತಿಗೆಯ ಮೇಲೆ ನಾತ ಕರುಳು ಜೋತು ಹಾಕಿದವರಿಗೆ ಮನ್ನಿಸುತ್ತಿರಲಿಲ್ಲ. ಕಳ್ಳ- ಹುಚ್ಚ- ಮಾಟಗಾರನೆಂದವರನ್ನು ರುಂಡ- ಚೆಂಡಾಡಲು ಕತ್ತಿ ಹಿಡಿದು ಹೊರಟ ಹಿಂಬಾಲಕರನ್ನು ತಡೆಯುತ್ತಿರಲಿಲ್ಲ. ಪ್ರೀತಿಯ ಚಿಕ್ಕಪ್ಪ ಹಂಝರನ್ನು ಬರ್ಬರವಾಗಿ ಕೊಂದು ಕರುಳು ಸಿಗಿದು ಬಾಯಿಯಲ್ಲಿ ಜಗಿದುಗಿದವರನ್ನು ಕ್ಷಮಿಸಿ ಧರ್ಮದ ಅನುಯಾಯಿಗಳಾಗಿ ಸ್ವೀಕರಿಸುತ್ತಿರಲಿಲ್ಲ.

ಆ ಮಹಾ ದಾರ್ಶನಿಕರ ಮಾತುಗಳನ್ನು ಆಲಿಸದವನು ಎಂದಿಗೂ ಹಿಂಸೆಯ ಹಾದಿ ಹಿಡಿಯುವುದಿಲ್ಲ.” ಎಂದು ಯುವ ಸಾಹಿತಿ ಮುನವ್ವರ್‌ ಜೋಗಿಬೆಟ್ಟು ಫೇಸ್‌ಬುಕ್‌ ಮೂಲಕ ತಮ್ಮ ಖಂಡನೆಯನ್ನು ದಾಖಲಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡದ ಕವಿ, ಗೀತೆಗಾರ ಕವಿರಾಜ್‌ ಅವರು, “ಕೊಲೆಗಡುಕರಿಗೆ ಬದುಕುವ ಹಕ್ಕಿಲ್ಲ. ಇಂತಹಾ ಪೈಶಾಚಿಕ ಕೃತ್ಯ ಎಸಗುವವರು ಯಾರೇ ಆಗಿರಲಿ , ಕಾರಣ ಏನೇ ಇರಲಿ ಇಂತಾ ಧರ್ಮಾಂಧ ರಕ್ಕಸರು ನಾಗರೀಕ ಸಮಾಜದಲ್ಲಿ ಬದುಕಲು ಅರ್ಹರಲ್ಲ.” ಎಂದು ಪೋಸ್ಟ್‌ ಮಾಡಿದ್ದಾರೆ.

“ಕೊಲ್ಲುವವರನ್ನು 'ಕೊಲೆಗಡುಕರು' ಎನ್ನಲು ಯಾವ ವಿನಾಯಿತಿಗಳೂ ಇಲ್ಲ. ಅವರು 'ಕೊಲೆಗಡುಕರು'. ಆದ್ರೆ ಇವತ್ತು ಹೇಳುತ್ತಿರುವಷ್ಟು ನೈತಿಕತೆಯನ್ನೇ ಸದಾಕಾಲವೂ ಹೇಳುವಷ್ಟು ಉಳಿಸಿಕೊಳ್ಳಬೇಕಷ್ಟೇ! ಮನುಷ್ಯನನ್ನು ಮನುಷ್ಯ ಕೊಂದು ಉಳಿಸುಕೊಳ್ಳುವಂತಹದ್ದೇನೂ ಈ ನೆಲದಲ್ಲಿಲ್ಲ. “ ಎಂದು ಯುವ ಕವಿ, ಲೇಖಕ ರಾಜೇಂದ್ರ ಪ್ರಸಾದ್‌ ಬರೆದಿದ್ದಾರೆ.

“ಹಿಂಸೆ ಪ್ರತಿಹಿಂಸೆ, ದಾಳಿ ಪ್ರತಿದಾಳಿ, ಹತ್ಯೆ ಪ್ರತಿಹತ್ಯೆ - ಓಹ್ ನಮ್ಮ ಸಮಾಜ ಎತ್ತ ಸಾಗುತ್ತಿದೆ. ಉದಯಪುರದ ಆಘಾತಕಾರಿ ಘಟನೆ ಸಮಾಜದ ಕಣ್ತೆರೆಸಬೇಕಿದೆ. ಕಾರಣ ಏನೇ ಇರಲಿ, ಉದ್ದೇಶ ಯಾವುದೇ ಇರಲಿ, ಸಮುದಾಯ ದ್ವೇಷ ಮತ್ತು ಮತಾಂಧತೆ ಒಂದು ಸಮುದಾಯವನ್ನು, ಸಮಾಜವನ್ನು ಎಂತಹ ಕ್ರೂರಾವಸ್ಥೆಗೆ ಕೊಂಡೊಯ್ಯುತ್ತದೆ ಎನ್ನಲು ಉದಯಪುರ ಅಮಾನುಷ ಹತ್ಯೆ ಸಾಕ್ಷಿ. ಭಾರತದ ಸಾಮಾಜಿಕ-ಸಾಂಸ್ಕೃತಿಕ ನಿಘಂಟಿನಿಂದ " ಧಾರ್ಮಿಕ ಭಾವನೆಗಳಿಗೆ ಧಕ್ಕೆ " ಎಂಬ ಮೂರು ಪದಗಳನ್ನು ಅಳಿಸಿಹಾಕಬೇಕು. ಕೊಲೆಗಡುಕ ಮನಸ್ಥಿತಿಗೆ ಸಾಂಸ್ಥಿಕ-ಸಾಂಘಿಕ ಸ್ವರೂಪ ಮತ್ತು ಆಯಾಮವನ್ನು ಕೊಡುತ್ತಿರುವ ವಿಚ್ಚಿದ್ರಕಾರಿ ಮನಸುಗಳು ಇನ್ನಾದರೂ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ನಾವು ಎತ್ತ ಸಾಗುತ್ತಿದ್ದೇವೆ ದೇಶವನ್ನು ಎತ್ತ ಕೊಂಡೊಯ್ಯುತ್ತಿದ್ದೇವೆ ಸಮಾಜವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದೇವೆ ? ಇದು ಪ್ರತಿಯೊಂದು ಪ್ರಜ್ಞಾವಂತ ಮನಸ್ಸನ್ನು ಕಾಡಬೇಕಾದ ಪ್ರಶ್ನೆ.” ಎಂದು ಹಿರಿಯ ಲೇಖಕ ದಿವಾಕರ ನಾರಾಯಣ ರಾವ್‌ ಪೋಸ್ಟ್‌ ಮಾಡಿದ್ದಾರೆ.

“ಇಂತಹ ಘೋರ ಹತ್ಯೆ ಮಾಡಿದವರನ್ನು ತ್ವರಿತ ನ್ಯಾಯಲಯದಲ್ಲಿ

(fast track court) ತುರ್ತು ವಿಚಾರಣೆ ನಡೆಸಿ ಕಾನೂನಿನಡಿಯಲ್ಲಿ ಅತ್ಯಂತ ಶೀಘ್ರವಾಗಿ ಗಲ್ಲಿಗೇರಿಸಬೇಕು..” ಎಂದು ಸಾಮಾಜಿಕ ಹೋರಾಟಗಾರ, ಹಿರಿಯ ವಕೀಲರಾದ ದ್ವಾರಕನಾಥ್‌ ಚೊಕ್ಕ ಅವರು ಆಗ್ರಹಿಸಿದ್ದಾರೆ.

Full View Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News