ಮೋದಿ ನಾಝಿ ಆಡಳಿತವನ್ನು ನೆನಪಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್

Update: 2022-06-28 18:24 GMT

ಬೆಂಗಳೂರು, ಜೂ.28: ತಮ್ಮ ಹುಳುಕುಗಳ ವಿರುದ್ಧ ಧ್ವನಿ ಎತ್ತಿದ್ದವರ ಧ್ವನಿಯನ್ನು ಮಟ್ಟ ಹಾಕುವ ಕೆಲಸವನ್ನು ಮೋದಿ ಸರಕಾರ ಮಾಡುತ್ತಿದೆ. ತೀಸ್ತಾ ಸೆಟಲ್ವಾಡ್, ಪತ್ರಕರ್ತ ಮುಹಮ್ಮದ್ ಝುಬೇರ್ ಬಂಧನ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಲಜ್ಜೆಗೆಟ್ಟ ದಾಳಿ. ಹಿಟ್ಲರ್‍ನ ತದ್ರೂಪು ತಳಿಯಂತೆ ಗೋಚರಿಸುತ್ತಿರುವ ಮೋದಿಯವರು ನಾಝಿ ಆಡಳಿತವನ್ನು ನೆನಪಿಸುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ತಮ್ಮ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೋದಿಯವರು ಸಾಮಾಜಿಕ ಹೋರಾಟಗಾರರನ್ನು ಮುಗಿಸಲು ಪೆÇಲೀಸರನ್ನು ಬಳಸುತ್ತಿದ್ದಾರೆ. ಸುಳ್ಳು ಪ್ರಕರಣ ದಾಖಲಿಸುವ ಮೂಲಕ ನ್ಯಾಯಕ್ಕಾಗಿ ಹೋರಾಡುವವರ ಬಲಿ ಹಾಕುವ ಸಂಚು ಮೋದಿಯವರದ್ದು. ಮೋದಿಯವರ ಸತ್ಯದ ಮೇಲಿನ ಸುಳ್ಳಿನ ಅಕ್ರಮಣ ಇನ್ನೆಷ್ಟು ದಿನ? ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ತಮ್ಮನ್ನು ಯಾರೂ ಪ್ರಶ್ನಿಸಬಾರದು, ತಮ್ಮ ವಿರುದ್ಧ ಯಾರೂ ಟೀಕೆ ಮಾಡಬಾರದು ಎಂಬುದು ಮೋದಿಯವರ ಧೋರಣೆ. ಮುಹಮ್ಮದ್ ಝುಬೇರ್ ಬಂಧನ ಇದಕ್ಕೆ ಸಾಕ್ಷಿ. ದೇಶ ಇಂದು ಸರ್ವಾಧಿಕಾರಿ ಆಡಳಿತದ ಹೊಸ ಅವತರಣಿಕೆಯನ್ನು ನೋಡುತ್ತಿದೆ. ಮೋದಿಯವರ ಸರ್ವಾಧಿಕಾರಿ ಧೋರಣೆ ದೇಶದ ದುರಂತ ಅಂತ್ಯಕ್ಕೆ ಮುನ್ನುಡಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮೋದಿ ಆಡಳಿತ ಟೀಕಿಸಿದ ಕಾರಣಕ್ಕಾಗಿ ಸಾಮಾಜಿಕ ಹೋರಾಟಗಾರರಾದ ಸುಧಾ ಭಾರದ್ವಾಜ್, ಅರುಣ್ ಫೆರೆರಾ, ಗೌತಮ್ ನವ್ಲಾಕಾ, ಆನಂದ್ ತೇಲ್ತುಂಬ್ಡೆ, ವರವರ ರಾವ್‍ರನ್ನು ಈ ಸರಕಾರ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗಟ್ಟಿದೆ. ಈಗ ತೀಸ್ತಾ ಹಾಗೂ ಝುಬೇರ್ ಬಂಧನವೂ ಮೋದಿಯವರ ದ್ವೇಷದ ಫಲ. ಇದು ಮೋದಿಯವರ ಹಿಟ್ಲರ್ ಮನಃಸ್ಥಿತಿಯಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಹೊಗಳು ಭಟ್ಟರಿಂದ ಸದಾ ಹೊಗಳಿಸಿಕೊಳ್ಳುವ ಮೋದಿಯವರಿಗೆ ತೆಗಳಿಕೆ ಅಪಥ್ಯ. ಹಾಗಾಗಿ ತಮ್ಮ ವಿರುದ್ಧದ ಯಾವುದೇ ರಚನಾತ್ಮಕ ಟೀಕೆಯನ್ನೂ ಸ್ವೀಕರಿಸಲು ಮೋದಿಯವರಿಗೆ ಆಗುತ್ತಿಲ್ಲ. ಸೈದಾಂತಿಕ ವೈರುಧ್ಯ, ಭಿನ್ನ ರಾಜಕೀಯ ನಿಲುವು ಹಾಗೂ ಟೀಕೆ ಟಿಪ್ಪಣಿ ಪ್ರಜಾಪ್ರಭುತ್ವದ ಒಂದು ಭಾಗ. ಇದು ಮೋದಿಯಂತಹ ಸ್ವಘೋಷಿತ ವಿಶ್ವಗುರುವಿಗೆ ಅರ್ಥವಾಗದಿದ್ದರೆ ಹೇಗೆ? ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News