ನಕಲಿ ಅಭಿವೃದ್ಧಿ ಶೂರರು ಎಂಬುದನ್ನು ಸಾರಿ ಹೇಳುತ್ತದೆ: ಪ್ರತಾಪ್ ಸಿಂಹಗೆ ಎಚ್.ಸಿ ಮಹದೇವಪ್ಪ ತಿರುಗೇಟು

Update: 2022-06-29 13:06 GMT

ಬೆಂಗಳೂರು, ಜೂ. 29: ‘ಸಂಸದ ಪ್ರತಾಪಸಿಂಹ ಅವರು ತಮ್ಮದೇ ಪಕ್ಷದ ಯಡಿಯೂರಪ್ಪ, ಶೆಟ್ಟರ್, ಕಾರಜೋಳ ಹಾಗೂ ಇನ್ನಿತರೆ ಬಿಜೆಪಿ ನಾಯಕರಿಗೆ ಕರೆ ಮಾಡಿ, ಸರ್ ನೀವು ಮಾಜಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ, ಏಕೆ ಸನ್ಮಾನ ಮಾಡಿದ್ದಿರಿ? ಎಂದು ಕೇಳಿದರೆ ಅವರೇ ಉತ್ತರ ಹೇಳುತ್ತಾರೆ. ಆಗ ನನ್ನ ಸಮಯವೂ ಉಳಿಯುತ್ತದೆ ತಮ್ಮ ಸಮಯವೂ ಉಳಿಯುತ್ತದೆ!' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕದ ಉದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸಿದ್ದೀರ ಸರ್, ಎಂದು ಗೌರವದಿಂದ ಸನ್ಮಾನ ಮಾಡಿದರು. ಕೆಲಸ ಮಾಡಿದ ಒಬ್ಬರನ್ನು ಗೌರವಿಸುವ ನಿಟ್ಟಿನಲ್ಲಿ ಇದು ಇತ್ತೀಚಿನ ರಾಜಕಾರಣದಲ್ಲಿ ಪಕ್ಷಾತೀತವಾಗಿ ನಾವು ರೂಢಿಸಿಕೊಳ್ಳಬೇಕಾದ ಆರೋಗ್ಯಕರ ಪ್ರಜಾಪ್ರಭುತ್ವದ ನಡೆ' ಎಂದು ಸಲಹೆ ನೀಡಿದ್ದಾರೆ.

‘ಇದು ಪ್ರತಾಪ್ ಸಿಂಹ ಅವರಿಗೆ ತಿಳಿಯದೇ ಹೋದರೆ ಅದು ಅವರ ಸಮಸ್ಯೆಯೇ ವಿನಃ ನಮ್ಮದಲ್ಲ. ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲದ ಬಿಜೆಪಿಗರು ತಮ್ಮ ಕಳಪೆ ಐಟಿ ಸೆಲ್‍ಗಳಲ್ಲಿ ಫೊಟೋಶಾಪ್ ಮೂಲಕ ಅಭಿವೃದ್ಧಿಯ ಪರ್ವವನ್ನೇ ಹರಿಸಿದ್ದಾರೆ. ಇವರು ಯಾವ ಮಟ್ಟಕ್ಕೆ ಇಳಿಯುತ್ತಾರೆಂದರೆ ಅಲ್ಲೆಲ್ಲೋ ಫ್ರಾನ್ಸ್, ಅಮೇರಿಕಾ, ಸ್ವಿಟ್ಜಲೆರ್ಂಡ್‍ನಂತಹ ದೇಶದಲ್ಲಿ ಅಭಿವೃದ್ಧಿ ಮಾಡಿದ ರಸ್ತೆಗಳ ಫೋಟೋವನ್ನು ಬಳಸಿಕೊಂಡು ‘ನೋಡಿ ಇದೇ ಉತ್ತರ ಪ್ರದೇಶದ ರಸ್ತೆ, ಇದೇ ಗುಜರಾತಿನ ಅಭಿವೃದ್ಧಿ' ಎಂದೆಲ್ಲಾ ಸುಳ್ಳು ಹಬ್ಬಿಸುತ್ತಾರೆ. ಪಾಪ ನಮ್ಮ ಜನರು ಅಲ್ಲಿಗೆಲ್ಲಾ ಹೋಗಿ ಪರೀಕ್ಷೆ ಮಾಡುವುದಿಲ್ಲ ಅಲ್ಲವೇ?' ಎಂದು ಅವರು ಟೀಕಿಸಿದ್ದಾರೆ.

‘ಹಾಗಾಗಿ ಇವರು ಆಡಿದ್ದೇ ಆಟ, ಹೂಡಿದ್ದೇ ಲಗ್ಗಿ ಎಂಬಂತಾಗಿದೆ ಇವರ ನಕಲಿ ಅಭಿವೃದ್ಧಿಯ ಕಥೆ. ಮೊನ್ನೆ ಪ್ರಧಾನಿ ಬಂದು ಹೋದ ಮೇಲೆ ಜನರು ಬರಿಗೈಯಲ್ಲೇ ರಸ್ತೆಯ ಡಾಂಬರ್ ಅನ್ನು ಕಿತ್ತ ಸಂಗತಿಯು ಮಾಧ್ಯಮದಲ್ಲೇ ಪ್ರಸಾರವಾಯಿತು. ಇದು ಇವರು ಎಂತಹ ನಕಲಿ ಅಭಿವೃದ್ಧಿ ಶೂರರು ಎಂಬುದನ್ನು ಸಾರಿ ಹೇಳುತ್ತದೆ. ನನ್ನ ಸಾರ್ವಜನಿಕ ಜೀವನದಲ್ಲಿ ಇಂತಹ ಸುಳ್ಳು-ವಂಚನೆಯ ರಾಜಕಾರಣದ ಮಾರ್ಗವನ್ನು ನಾನು ಕಂಡಿರಲಿಲ್ಲ' ಎಂದು ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News