ಸಿದ್ದರಾಮಯ್ಯ ಸರಕಾರಿ ನೌಕರರಲ್ಲ, ಆದರೂ ವರ್ಗಾವಣೆಯಾಗುತ್ತಲೇ ಇದ್ದಾರೆ: ಬಿಜೆಪಿ ಟೀಕೆ

Update: 2022-06-29 13:13 GMT

ಬೆಂಗಳೂರು, ಜೂ. 29: ‘ಒಲೈಕೆಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಎಷ್ಟು ಓಲೈಕೆ ಮಾಡಿದರೇನು ಫಲ, ಸಿದ್ದರಾಮಯ್ಯ ಅಲೆಯೂ ಇಲ್ಲ, ಒಂದು ಗಟ್ಟಿಯಾದ ನೆಲೆಯೂ ಇಲ್ಲ! ಬಾದಾಮಿ ಕ್ಷೇತ್ರಕ್ಕೆ ಹೋಗಿ ಬರಲು ವಯಸ್ಸಿನ ಸಮಸ್ಯೆ ಕಾಡುತ್ತದೆ.ಆದರೆ, ಮುಖ್ಯಮಂತ್ರಿಯಾಗಲು ಯಾವುದೇ ಸಮಸ್ಯೆ ಕಾಡುವುದಿಲ್ಲ! ವಿಪರ್ಯಾಸವಲ್ಲದೆ ಮತ್ತೇನು?' ಎಂದು ಬಿಜೆಪಿ ಟೀಕಿಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯ ಸರಕಾರಿ ನೌಕರರಲ್ಲ, ಆದರೂ ವರ್ಗಾವಣೆಯಾಗುತ್ತಲೇ ಇದ್ದಾರೆ. ಅಧಿಕಾರದ ಮೋಹಕ್ಕಾಗಿ, ಸುರಕ್ಷಿತ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಅವರೇ, ಸ್ಪರ್ಧಿಸಲು ಒಂದು ಕ್ಷೇತ್ರ ಸಿಗುತ್ತಿಲ್ಲವೆಂದಾದರೆ ನಿಮ್ಮನ್ನು ಜನರು ತಿರಸ್ಕರಿಸಿದ್ದಾರೆಂದರ್ಥವಲ್ಲವೇ?' ಎಂದು ವಾಗ್ದಾಳಿ ನಡೆಸಿದೆ.

‘ಪ್ರತಿ ಬಾರಿಯೂ ಸಿದ್ದರಾಮಯ್ಯ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುವುದರ ಅರ್ಥವೇ ಬೇರೆಯಿದೆ. ಒಮ್ಮೆ ವರುಣ, ಮತ್ತೊಮ್ಮೆ ಚಾಮುಂಡೇಶ್ವರಿ, ಮಗದೊಮ್ಮೆ ಬಾದಾಮಿ ಈ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಕೊನೆಯ ಚುನಾವಣೆ ಎಂಬ ಅರ್ಥದಲ್ಲಿ ಸಿದ್ದರಾಮಯ್ಯ ಹೇಳುತ್ತಿರುವುದು, ರಾಜಕೀಯ ನಿವೃತ್ತಿಯ ಕೊನೆಯ ಚುನಾವಣೆಯೆಂದಲ್ಲ!' ಎಂದು ಟೀಕಿಸಿದೆ.

‘ಒಮ್ಮೆ ದಕ್ಷಿಣ, ಮತ್ತೊಮ್ಮೆ ಉತ್ತರ! ಮುಂದಿನ ಚುನಾವಣೆಗೆ ಸುರಕ್ಷಿತ ಕ್ಷೇತ್ರ ಹುಡುಕುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮದು ರಾಜಕೀಯ ಆಟವೋ ಅಥವಾ ಫುಟ್ಬಾಲ್ ಆಟವೊ? ಗೋಲು ಹೊಡೆಯಲಾರಿರಿ, ಗುರಿಯ ಮುಟ್ಟಲಾರಿರಿ, ನಿವೃತ್ತಿ ಘೋಷಣೆ ಮಾಡಬಾರದೇಕೆ?' ಎಂದು ಬಿಜೆಪಿ ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News