ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರಿಗೆ 456 ರೂ.ಶುಲ್ಕದಿಂದ ವಿನಾಯಿತಿ: ಶಿಕ್ಷಣ ಇಲಾಖೆಯಿಂದ ಸುತ್ತೋಲೆ

Update: 2022-06-29 14:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.29: ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2022-23ನೆ ಶೈಕ್ಷಣಿಕ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರಿಗೆ 456 ರೂಪಾಯಿ ಶುಲ್ಕದಿಂದ ವಿನಾಯಿತಿ ನೀಡಲಾಗಿದ್ದು, ಸದರಿ ಮೊತ್ತವನ್ನು ಕಾಲೇಜು ಪ್ರಾಂಶುಪಾಲರ ಖಾತೆಗೆ ಜಮೆ ಮಾಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ. 

ರಾಜ್ಯದ ಎಲ್ಲ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಪಿಯುಸಿಯಲ್ಲಿ ಪ್ರವೇಶ ಪಡೆಯುವ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಸರಕಾರಿ ಆದೇಶದಲ್ಲಿ ತಿಳಿಸಿರುವಂತೆ 2019-20ನೆ ಸಾಲಿನಿಂದ 456 ರೂಪಾಯಿ ಶುಲ್ಕದಿಂದ ವಿನಾಯಿತಿ ನೀಡಿ ಪ್ರವೇಶ ನೀಡಲು ಆದೇಶಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಕೇವಲ ಆಯಾ ವರ್ಷಗಳಿಗೆ ಮಾತ್ರ ಸೀಮಿತವಾಗಿ ಶುಲ್ಕದಿಂದ ವಿನಾಯಿತಿ ನೀಡಿ ಪ್ರಾಂಶುಪಾಲರ ಖಾತೆಗೆ ಜಮೆ ಮಾಡಲು ಅನುಮತಿ ನೀಡಲಾಗುತ್ತಿತ್ತು.

ಆದರೆ, ಸರಕಾರದ ಆದೇಶದಂತೆ 2022-23ನೆ ಶೈಕ್ಷಣಿಕ ಸಾಲಿನಿಂದ ಶಾಶ್ವತವಾಗಿ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ 456 ರೂಪಾಯಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿರುತ್ತದೆ.

ಮುಂದುವರಿದ ಶುಲ್ಕ ಪಾವತಿಗಾಗಿ ಒದಗಿಸುವ ಅನುದಾನವನ್ನು ಸಂಬಂಧಿಸಿದ ಪ್ರಾಂಶುಪಾಲರ ಖಾತೆಗೆ ಖಜಾನೆ-2 ತಂತ್ರಾಂಶದ ಮೂಲಕ ಬಿಡುಗಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News