ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸರ ದೌರ್ಜನ್ಯ ಆರೋಪ: ತನಿಖೆಗೆ ಮಾನವ ಹಕ್ಕುಗಳ ಆಯೋಗ ಆದೇಶ

Update: 2022-07-03 16:31 GMT
ಇನ್‍ ಸ್ಪೆಕ್ಟರ್ ದಿವಾಕರ್ | ಪಿಎಸ್ಸೈ ಭರತ್ ಕುಮಾರ್

ಬೆಂಗಳೂರು, ಜೂ.29: ಲಾಕ್‍ಡೌನ್ ಸಂದರ್ಭದಲ್ಲಿ ಮಾರ್ಗಸೂಚಿ ಉಲ್ಲಂಘನೆ ಆರೋಪದಡಿ ಪೊಲೀಸರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಕರ್ನಾಟಕ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ ಎಂದು ವರದಿಯಾಗಿದೆ.

ಕೋವಿಡ್ ಸಂಬಂಧ 2020ರಲ್ಲಿ ಲಾಕ್‍ಡೌನ್ ಘೋಷಿಸಲಾಗಿತ್ತು. ಭಟ್ಕಳದಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಮುಹಮ್ಮದ ಹಸನ್ ಇರ್ಷಾದ್ ಎಂಬುವರು ಮೆಡಿಕಲ್ ಶಾಪ್‍ಗೆ ಹೋಗಿ ಔಷಧಿ ಖರೀದಿಸಿ ಮನೆಗೆ ಬರುವಾಗ ಗಸ್ತು ತಿರುಗುತ್ತಿದ್ದ ಪೊಲೀಸರು ಇರ್ಷಾದ್ ಮೇಲೆ ಲಾಠಿ ಪ್ರಹಾರ ನಡೆಸಿ ಮನಬಂದಂತೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಹಲ್ಲೆಯಿಂದ ಕಾಲು ಹಾಗೂ ತೊಡೆಗಳ ಮೇಲೆ ಬಾಸುಂಡೆ ಬಂದಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹಲ್ಲೆ ಸಂಬಂಧ ಕ್ರಮ ಕೈಗೊಳ್ಳುವಂತೆ ಭಟ್ಕಳ ಠಾಣೆಯ ಇನ್‍ಸ್ಪೆಕ್ಟರ್ ದಿವಾಕರ್ ಅವರಿಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಿಕೊಳ್ಳದೆ ಅವರು ಪೊಲೀಸರೊಂದಿಗೆ ರಾಜಿಗೆ ಮುಂದಾಗಿದ್ದರು.

ಬಳಿಕ ನ್ಯಾಯ ಕೋರಿ ಇರ್ಷಾದ್ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು. ಈ ಸಂಬಂಧ ಭಟ್ಕಳ ಪೊಲೀಸ್ ಠಾಣೆಯ ಪಿಎಸ್ಸೈ ಭರತ್ ಕುಮಾರ್, ಇನ್‍ಸ್ಪೆಕ್ಟರ್ ದಿವಾಕರ್ ಸೇರಿದಂತೆ ಇನ್ನಿತರರ ಮೇಲೆ ಪೊಲೀಸ್ ಇಲಾಖಾ ತನಿಖೆಗೆ ಆಯೋಗ ಆದೇಶಿಸಿದ್ದು, ಜೊತೆಗೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News