ಮೂರು ತಿಂಗಳಿಗೊಮ್ಮೆ ಕೆಇಆರ್ ಸಿಯಿಂದ ದರ ಪರಿಷ್ಕರಣೆ: ಸಚಿವ ಸುನಿಲ್ ಕುಮಾರ್

Update: 2022-06-29 14:45 GMT

ಬೆಂಗಳೂರು, ಜೂ. 29: ‘ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡುವುದು ಸರಕಾರವಲ್ಲ. ಬದಲಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗ(ಕೆಇಆರ್‍ಸಿ) ತೀರ್ಮಾನ ಮಾಡಲಿದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತಿದೆ' ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದರ ಏರಿಕೆ ಸಂಬಂಧ ಎಲ್ಲ ಎಸ್ಕಾಂಗಳು ಕೆಇಆರ್‍ಸಿ ಮುಂದೆ ಹೋಗುತ್ತವೆ. 2013-14ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಅವಧಿಯಲ್ಲಿಯೂ ನಿರ್ಧಾರ ತೆಗೆದುಕೊಂಡಿದ್ದರು. ಕಲ್ಲಿದ್ದಲು, ಇಂಧನ ದರ ಹೆಚ್ಚಳ ಆದ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ತೀರ್ಮಾನ ಮಾಡಿದರು' ಎಂದು ತಿಳಿಸಿದರು.

‘ದರ ಹೆಚ್ಚಳ ಆದ ಸಂದರ್ಭದಲ್ಲಿ ಅದನ್ನು ಸರಿದೂಗಿಸಲು ನಿರ್ಧಾರ ತೆಗೆದುಕೊಂಡಿದ್ದರು. ಅಂದಿನಿಂದ ಈವರೆಗೂ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತಾ ಬರಲಾಗುತ್ತಿದೆ. ಇಲ್ಲಿ ಸರಕಾರದಿಂದ ಯಾವುದೇ ದರ ಹೆಚ್ಚಳ ಮಾಡಿಲ್ಲ. ಇಂಧನ ದರ ಪರಿಷ್ಕರಣೆಯನ್ನು ಕೆಇಆರ್‍ಸಿ ಮಾಡಿದೆ' ಎಂದು ಸುನೀಲ್ ಕುಮಾರ್ ಹೇಳಿದರು.

‘ರಾಜಸ್ಥಾನದ ಉದಯಪುರದಲ್ಲಿ ನಡೆದ ಕೊಲೆ ಅತ್ಯಂತ ಹೇಯ ಕೃತ್ಯ. ಅವರ ಸಾವಿಗೆ ಸಂತಾಪ ಸೂಚಿಸುವೆ. ಒಂದು ಪೆÇೀಸ್ಟ್ ಹಾಕಿದ್ದಕ್ಕೆ ಘೋರ ಕೃತ್ಯ ಮಾಡಿದ್ದು, ಇದು ಭಯೋತ್ಪಾದನೆಯ ಮುಂದುವರಿದ ಭಾಗ. ಕಾಶ್ಮೀರ, ಕೇರಳ, ಕರ್ನಾಟಕದಲ್ಲಿ ಆಗಿತ್ತು. ಇದೀಗ ರಾಜಸ್ಥಾನದಲ್ಲಿಯೂ ನಡೆದಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಅತ್ಯಂತ ಹೇಯ ರೀತಿಯಲ್ಲಿ ಕತ್ತು ಸೀಳಿ ಹತ್ಯೆ ಮಾಡಿರುವ ಪ್ರಕರಣದ ಹಿಂದೆ ಒಬ್ಬರಲ್ಲ, ಅನೇಕರು ಇದ್ದಾರೆ. ಇದನ್ನು ಕಾನೂನು ನೋಡಿಕೊಳ್ಳಲಿದೆ. ಕೃತ್ಯವನ್ನು ಲಘುವಾಗಿ ಖಂಡಿಸುವ ಕೆಲಸವನ್ನು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಇತರೆ ಪಕ್ಷ ಮಾಡಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಎದೆ ನಡುಗಿತು ಎಂದಿದ್ದಾರೆ. ಇದು ಕೇವಲ ಟ್ವೀಟ್‍ನಲ್ಲಿ ಮಾತ್ರವೇ ಎಂದು ಗೊತ್ತಿಲ್ಲ. ಈ ಹಿಂದೆ ರಾಜ್ಯದಲ್ಲಿ ಸಂಘ ಪರಿವಾರದ ಯುವಕರ ಹತ್ಯೆ ನಡೆದ ಸಂದರ್ಭದಲ್ಲಿ ಅವರಿಗೆ ಏಕೆ ಎದೆ ನಡುಗಲಿಲ್ಲ' ಎಂದು ಸುನೀಲ್ ಕುಮಾರ್ ಇದೇ ವೇಳೆ ಪ್ರಶ್ನಿಸಿದರು.

‘ಈ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಈ ಘಟನೆ ದಿಢೀರ್ ಆಗಿ ಸಂಭವಿಸಿಲ್ಲ. ಅಲ್ಲಿನ ಸರಕಾರ ಏಕೆ ಬಿಗಿ ಕ್ರಮ ತೆಗೆದುಕೊಳ್ಳಲಿಲ್ಲ. ಇದರಲ್ಲೂ ತುಷ್ಟೀಕರಣದ ರಾಜಕಾರಣ ಇರಬಹುದು. ಇದರ ಹಿಂದೆ ಸಾವಿರಾರು ಜನರ ಕೈವಾಡ ಇದೆ. ಪ್ರಧಾನಿ ಮೋದಿ ಅವರಿಗೆ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸುನೀಲ್ ಕುಮಾರ್ ದೂರಿದರು.

‘ಪ್ರತಿಪಕ್ಷ ಕಾಂಗ್ರೆಸ್‍ನವರಿಗೆ ಕಲ್ಲಂಗಡಿ ಹಣ್ಣು ಧ್ವಂಸ ಮಾಡಿದ ಘಟನೆ ಆದ ವೇಳೆ ಮನ ಕರಗುತ್ತದೆ. ಆದರೆ, ರಕ್ತದೋಕುಳಿಯಾದಾಗ ಅವರು ಉಸಿರೆತ್ತುವುದಿಲ್ಲ. ಶಿವಮೊಗ್ಗದಲ್ಲಿ ಹರ್ಷ ಕೊಲೆ ನಡೆದಾಗಲೂ ಅವರಿಗೆ ಏನೂ ಅನಿಸಲಿಲ್ಲ. ಈ ಕತ್ತಿ ಎಲ್ಲರ ಕುತ್ತಿಗೆಗೂ ಬರಲಿದೆ ಎನ್ನುವುದು ಅವರಿಗೂ ಗೊತ್ತಾಗಿದೆ. ಇಂತಹವರಿಗೆ ಇಲ್ಲಿ ಇರಲು ಅವಕಾಶ ನೀಡಬೇಕಾ?' ಎಂದು ಸುನೀಲ್ ಕುಮಾರ್ ಪ್ರಶ್ನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News