ಆಗಸ್ಟ್ 3ರಂದು ‘ಸಿದ್ದರಾಮೋತ್ಸವ'ಕ್ಕೆ ಭರದ ಸಿದ್ಧತೆ

Update: 2022-06-29 17:37 GMT

ಬೆಂಗಳೂರು, ಜೂ. 29: ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳೆಲ್ಲಾ ಸೇರಿ ಆಗಸ್ಟ್ 3ರಂದು ದಾವಣಗೆರೆಯಲ್ಲಿ ‘ಸಿದ್ದರಾಮೋತ್ಸವ' ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ರಾಜ್ಯದಲ್ಲಿ ‘ಸಿದ್ದರಾಮಯ್ಯರ ಪರ ಅಲೆ' ಸೃಷ್ಟಿಸುವುದರ ಜೊತೆಗೆ ‘ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ಬಿಂಬಿಸಲು ಅವರ ಒಡನಾಡಿಗಳು ಮುಂದಾಗಿದ್ದಾರೆಂದು ಗೊತ್ತಾಗಿದ್ದು, ಈ ಸಮಾವೇಶಕ್ಕೆ ಆರೇಳು ಲಕ್ಷ ಮಂದಿ ಒಗ್ಗೂಡಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಆಗಸ್ಟ್ ತಿಂಗಳಿಗೆ 75 ವರ್ಷ ತುಂಬಲಿದ್ದು, ಅವರ ‘ಅಮೃತ ಮಹೋತ್ಸವ'ದ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಕೇಂದ್ರ ಸ್ಥಾನವೂ ಆಗಿರುವ ದಾವಣಗೆರೆ ನಗರದಲ್ಲಿ ಆಗಸ್ಟ್ 3ರಂದು ಬೃಹತ್ ಸಮಾವೇಶ ಮಾಡುವ ಮೂಲಕ ‘ಸಿದ್ದರಾಮೋತ್ಸವ' ಆಚರಿಸಲು ‘ಸಿದ್ದರಾಮಯ್ಯ-75 ಅಭಿನಂದನಾ ಸಮಿತಿ’ ಅಗತ್ಯ ರೂಪುರೇಷೆ ಸಿದ್ಧಪಡಿಸುತ್ತಿದೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ ಹಾಗೂ ಡಾ.ಎಚ್.ಸಿ.ಮಹದೇವಪ್ಪ, ಮುಖಂಡರಾದ ಡಾ.ಬಿ.ಎಲ್. ಶಂಕರ್, ವಿ.ಆರ್.ಸುದರ್ಶನ್ ಸೇರಿದಂತೆ ಇನ್ನಿತರರು ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ಅವರು ಕೊಟ್ಟ ಜನಪರ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಕೊಡುಗೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಉದ್ದೇಶಿಸಲಾಗಿದೆ. ಜತೆಗೆ ಅವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ, ವಿಚಾರ ಸಂಕಿರಣ, ಛಾಯಾಚಿತ್ರಗಳ ಪ್ರದರ್ಶನ ಹಾಗೂ ಅವರ ಆಡಳಿತ ವೈಖರಿಯನ್ನು ಯುವ ಸಮೂಹಕ್ಕೆ ತಿಳಿಸಲು ಕೃತಿಗಳನ್ನು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.

ಕಾಂಗ್ರೆಸ್ ಪಕ್ಷದ ಗಮನಕ್ಕೆ ತಂದು ಪಕ್ಷಾತೀತವಾಗಿ ‘ಸಿದ್ದರಾಮೋತ್ಸವ’ವನ್ನು ಆಚರಿಸಲು ನಿರ್ಧರಿಸಿದ್ದು, ಸಿದ್ದರಾಮಯ್ಯರ ಬೆಂಬಲಿಗರು, ಹಿತೈಷಿಗಳು ಹಾಗೂ ಅವರ ಅಭಿಮಾನಿ ಶಾಸಕರು, ವಿಧಾನ ಪರಿಷತ್ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಈ ಸಮಾವೇಶಕ್ಕೆ ಜನರನ್ನು ಕರೆತರುವ ಹೊಣೆಯನ್ನು ವಹಿಸಲಾಗಿದ್ದು, ಈಗಾಗಲೇ ಸಿದ್ದರಾಮೋತ್ಸವಕ್ಕೆ ಭರದ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.


‘ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಧೀಮಂತ ನಾಯಕ. ಅವರ ಅಭಿಮಾನಿಗಳು ಹಾಗೂ ಹಿತೈಷಿಗಳೆಲ್ಲರೂ ಸೇರಿ ‘ಸಿದ್ದರಾಮೋತ್ಸವ' ಆಚರಿಸಲು ತೀರ್ಮಾನಿಸಿದ್ದು, ಯುವ ಸಮುದಾಯಕ್ಕೆ ಹಿಂದಿನ ಮತ್ತು ಇಂದಿನ ರಾಜಕೀಯ ಸ್ಥಿತಿಗಳನ್ನು ತಿಳಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ ಅವರು ನೀಡಿದ ಜನಪರ ಯೋಜನೆಗಳು ಹಾಗೂ ಕೊಡುಗೆಗಳನ್ನು ಜನರಿಗೆ ತಿಳಿಸಲಾಗುವುದು. ಪಕ್ಷದ ಜತೆ ಸಮಾಲೋಚನೆ ನಡೆಸಿಯೇ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಆಗಸ್ಟ್ 3ಕ್ಕೆ ದಾವಣಗೆರೆಯಲ್ಲಿ ಆರೇಳು ಲಕ್ಷ ಜನರನ್ನು ಸೇರಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ'

-ಡಾ.ಎಚ್.ಸಿ.ಮಹದೇವಪ್ಪ ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News