ಎಚ್.ಡಿ.ಕೋಟೆ: ಊಟ ಸೇವಿಸಿದ ವಸತಿ ಶಾಲೆಯ 35 ವಿದ್ಯಾರ್ಥಿನಿಯರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Update: 2022-06-29 15:11 GMT
ಸಾಂದರ್ಭಿಕ ಚಿತ್ರ- PTI

ಎಚ್.ಡಿ.ಕೋಟೆ, ಜೂ.29: ತಾಲೂಕಿನ ಹಿರೇಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ ಶಾಲೆಯಲ್ಲಿ ಊಟ ಸೇವಿಸಿದ 35 ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ವರದಿಯಾಗಿದೆ.

ಮಂಗಳವಾರ ರಾತ್ರಿ ಊಟ ಸೇವಿಸಿದ ಬಳಿಕ ಈ ಘಟನೆ ಸಂಭವಿಸಿದ್ದು, ಅಸ್ವಸ್ಥರಾದ ವಿದ್ಯಾರ್ಥಿನಿಯರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 25 ವಿದ್ಯಾರ್ಥಿನಿಯರು ಗುಣಮುಖರಾಗಿದ್ದು, 10ಮಂದಿ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ತಾಲೂಕಿನ ಹಿರೇಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಒಟ್ಟು 130 ವಿದ್ಯಾರ್ಥಿನಿಯರಿದ್ದು, ಮಂಗಳವಾರ ರಾತ್ರಿ ಊಟ ಮಾಡಿದ ಬಳಿಕ ವಿದ್ಯಾರ್ಥಿನಿಯರಲ್ಲಿ ವಾಂತಿ ಕಾಣಿಸಿಕೊಂಡಿದೆ.

 ಕೂಡಲೇ 35 ವಿದ್ಯಾರ್ಥಿನಿಯರನ್ನು ಎಚ್.ಡಿ.ಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫುಡ್ ಪಾಯಿಝನ್ ಆಗಿರಬಹುದು ಎಂದು ಊಹಿಸಲಾಗಿದೆ. ಚಿಕಿತ್ಸೆ ಕೊಡಿಸಿದ ಬಳಿಕ ಬುಧವಾರ ಮುಂಜಾನೆ 25ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇನ್ನುಳಿದಂತೆ 10ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ. ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದು, ಭಯಪಡುವ ಅಗತ್ಯ ಇಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದ್ದಾರೆ.

ಶಾಸಕ ಭೇಟಿ: ವಿಷಯ ತಿಳಿಯುತ್ತದ್ದಂತೆಯೇ ಶಾಸಕ ಅನಿಲ್ ಚಿಕ್ಕಮಾದು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಭಯ ಪಡದಂತೆ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. ವಸತಿ ಶಾಲೆಗೆ ಆರೋಗ್ಯ ಇಲಾಖೆ ಬೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.

ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ಅಡುಗೆ ತಯಾರು ಮಾಡುವಾಗ ಶುಚಿತ್ವ ಕಾಯ್ದುಕೊಳ್ಳುತ್ತಿಲ್ಲ. ಶುಚಿ ರುಚಿಯಾದ ಊಟ ನೀಡುತ್ತಿಲ್ಲ, ರಾತ್ರಿ ಆಹಾರ ಸೇವನೆಯಿಂದಲೇ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂಬುದು ನನ್ನ ಅಭಿಪ್ರಾಯ.

- ಸುಮಲತಾ (ಹೆಸರು ಬದಲಿಸಲಾಗಿದೆ) ವಸತಿ ಶಾಲೆವಿದ್ಯಾರ್ಥಿನಿ


ನನ್ನ ಪುತ್ರಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವಸತಿ ಶಾಲೆಯಲ್ಲಿ ಊಟದ ವ್ಯವಸ್ಥೆ ಸರಿಯಿಲ್ಲ, ಮೇಲ್ವಿಚಾರಕರು ವಸತಿ ಶಾಲೆಗೆ ಸರಿಯಾಗಿ ಬರಲ್ಲ.

- ಶಿವಣ್ಣ, ಪೋಷಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News