ನಾರಾಯಣ ಗುರು ಪಠ್ಯ ಕೈಬಿಟ್ಟ ಕ್ರಮ ವಿರೋಧಿಸಿ ಉಗ್ರ ಹೋರಾಟ: ಸರಕಾರಕ್ಕೆ ವೇದಿಕೆ ಎಚ್ಚರಿಕೆ

Update: 2022-06-29 18:29 GMT
photo- twitter

ಬೆಂಗಳೂರು, ಜೂ. 29: ‘ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಸಮಾಜ ವಿಜ್ಞಾನದಿಂದ ಕೈಬಿಟ್ಟಿರುವ ಕ್ರಮವನ್ನು ಖಂಡಿಸಿ ಈಡಿಗ, ಬಿಲ್ಲವ, ನಾಮದಾರಿ ಸೇರಿದಂತೆ ಒಟ್ಟು 26 ಪಂಗಡಗಳನ್ನು ಒಳಗೊಂಡು ಬೃಹತ್ ಹೋರಾಟ ನಡೆಸಲಾಗುವುದು' ಎಂದು ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

ಬುಧವಾರ ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್, ಉಪಾಧ್ಯಕ್ಷ ದತ್ತಾತ್ರೇಯ, ‘ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಟ್ಟಿರುವುದು ಹಿಂದುಳಿದ ವರ್ಗಗಳ ವಿರೋಧಿ ನೀತಿಯಾಗಿದೆ, ಬಸವಣ್ಣ, ಭಗತ್ ಸಿಂಗ್, ರಾಷ್ಟ್ರಕವಿ ಕುವೆಂಪು ಅವರ ಚರಿತ್ರೆಯನ್ನು ಕೈಬಿಟ್ಟಾಗ ಆಯಾ ಸಮುದಾಯದವರು ಹೋರಾಟ ನಡೆಸಿದಾಗ ಪಠ್ಯದಲ್ಲಿ ಉಂಟಾಗಿರುವ ಲೋಪದೋಷಗಳ ಸರಿಪಡಿಸುವ ಬದಲಿಗೆ ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿತ್ತು. ಆದರೆ, ಮೇಲ್ವರ್ಗದವರ ಶೋಷಣೆ, ಅನಾಚಾರದ ವಿರುದ್ಧ ಹೋರಾಡಿ ಸಮಾಜದಲ್ಲಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ' ಎಂದು ಪ್ರಶ್ನಿಸಿದರು.

ಕಾರ್ಯಾಧ್ಯಕ್ಷ ಲೋಕೇಶ್ ಕೆ.ಎನ್. ಮಾತನಾಡಿ, ‘ರಾಜ್ಯದಲ್ಲಿ ಪ್ರಬಲ ಸಮುದಾಯವಾಗಿರುವ ಈಡಿಗ ಸಮುದಾಯ ರಾಜಕೀಯವಾಗಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಬೇರೆ ಸಮುದಾಯಗಳಿಗೆ ನೆರವಾಗಲು ಈಗಾಗಲೇ ನಿಗಮ ಮಂಡಳಿಯನ್ನು ರಚಿಸಲಾಗಿದೆ. ನೂರಾರು ಕೋಟಿ ರೂ.ಅನುದಾನ ಒದಗಿಸಲಾಗಿದೆ. ಆದರೆ, ಈಡಿಗ ಸಮುದಾಯಕ್ಕೆ ನಿಗಮ ಮಂಡಳಿ ರಚನೆ ಮಾಡಿಲ್ಲ. ಹೀಗಾಗಿ ಕೂಡಲೇಈಡಿಗ ಸಮಾಜಕ್ಕೆ ಪ್ರತ್ಯೇಕವಾಗಿ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ನಿಗಮ ರಚಿಸಬೇಕು' ಎಂದು ಆಗ್ರಹಿಸಿದರು.

ಖಚಾಂಚಿ ದಿನೇಶ್ ಮಾತನಾಡಿ, ‘ಕಲ್ಯಾಣ ಕರ್ನಾಟಕದ ಕಲಬುರಗಿ ಸೇರಿದಂತೆ ಅನೇಕ ಕಡೆ ಸೇಂದಿ ಇಳಿಸುವ ವೃತ್ತಿಯನ್ನು ಅವಲಂಬಿಸಿ ಈಡಿಗ ಜನಾಂಗದ ಸಾವಿರಾರು ಮಂದಿ ಜೀವನ ಸಾಗಿಸುತ್ತಿದ್ದಾರೆ. ಸೇಂದಿ ಬಂದ್ ಮಾಡಿರುವುದರಿಂದ ಉದ್ಯೋಗ ಕಳೆದುಕೊಂಡಿರುವ ಕುಟುಂಬಗಳಿಗೆ ಪರ್ಯಾಯ ಉದ್ಯೋಗ ನೀಡಬೇಕು. ನಾರಾಯಣಗುರು ಪಠ್ಯ ಮರುಪರಿಷ್ಕರಣೆಯೂ ಸೇರಿದಂತೆ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು' ಎಂದು ಎಚ್ಚರಿಕೆ ನೀಡಿದರು.

ಸಮಾಜದ ಮುಖಂಡರಾದ ಸಂತೋಷ್ ಈಡಿಗ, ಕಲ್ಯಾಣ ಕುಮಾರ್, ಶಿವಕುಮಾರ್ ರಾಯನ್, ಶಿವಕುಮಾರ್, ಆದರ್ಶ, ಪ್ರದೀಪ್, ಜನಾರ್ದನ್, ಕೃಷ್ಞಪ್ಪ ಜಿ.ಕೆ., ಸತೀಶ್, ಗುರುಮೂರ್ತಿ, ಶಿವರಾಮ್ ಪೂಜಾರಿ, ನಾಗರಾಜ, ಶಿವಕುಮಾರ್ ಹರತಾಳ, ವಕೀಲೆ ಅನಿತಾ ಎನ್. ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News