ಕಾಂಗ್ರೆಸ್ ಭವಿಷ್ಯ ಯಡಿಯೂರಪ್ಪ ನಡೆ ಮೇಲೆ ಅವಲಂಬಿಸಿದೆ: ಕುಮಾರಸ್ವಾಮಿ

Update: 2022-06-30 13:55 GMT

ಬೆಂಗಳೂರು, ಜೂ. 30: ‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿನ ನಡೆ ಮೇಲೆ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಅವಲಂಬಿತವಾಗಿದೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕರ ಪರಿಸ್ಥಿತಿ ಏನಿದೆ ಎಂಬುದು ಗೊತ್ತಿದೆ. ಯಡಿಯೂರಪ್ಪ ಮುಂದೆ ಏನು ಮಾಡುತ್ತಾರೆಂಬುದನ್ನು ನೋಡಿಕೊಂಡು ಹೀಗೆ ಮಾಡುತ್ತಿದ್ದಾರೆ. ಈ ಹಿಂದೆ ಬಿಎಸ್‍ವೈ ಬೇರೆ ಪಕ್ಷ ಕಟ್ಟಿದ್ದ ದಿನದ ಲೆಕ್ಕಾಚಾರವನ್ನು ಕಾಂಗ್ರೆಸ್ ನಾಯಕರು ಹಾಕಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದಿರುವ ಆಂತರಿಕ ವರದಿ ನೋಡಿದ್ದೇನೆ. ಆ ವರದಿಯಲ್ಲಿ ಮೂರು ರೀತಿಯ ಪ್ರತಿಕ್ರಿಯೆ ಇದೆ' ಎಂದು ಹೇಳಿದರು.

‘ನಾವು ಒಂದು ಸ್ಥಾನ ಇಲ್ಲದೆ ಇದ್ದಾಗಲೂ ಗೆದ್ದಿದ್ದೇವೆ. ಪರಿಷತ್ ಚುನಾವಣೆ ಬೇರೆ, ವಿಧಾನಸಭೆ ಚುನಾವಣೆ ಬೇರೆ. ಅವರು ಆಂತರಿಕ ಸಮೀಕ್ಷೆ ಮಾಡಲಿ. ನಮಗೆ ಯಾವುದೇ ಆತಂಕ ಇಲ್ಲ. ನಾವು ನಮ್ಮ ಗುರಿ ಮುಟ್ಟುತ್ತೇವೆ. ಕಾಂಗ್ರೆಸ್‍ನವರ ಆಂತರಿಕ ಸಮೀಕ್ಷೆ ಬಗ್ಗೆ ಮಾತನಾಡಲ್ಲ. ಅವರ ಒಳ ಒಪ್ಪಂದ ರಾಜ್ಯಸಭೆಯಲ್ಲಿ ಆಯ್ತು. ‘ಬಿ ಟೀಮ್' ಅನ್ನುವುದು ಯಾರು ಅಂತ ಗೊತ್ತಾಗಿದೆ' ಎಂದು ಅವರು ಟೀಕಿಸಿದರು.

ಸತ್ಯ ತಿರುಚುವ ಯತ್ನ: ‘ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರ ಹಿಡಿಯಬೇಕೆಂದು ದೊಡ್ಡ ಸರ್ವೇ ಮಾಡುವ ಕಂಪೆನಿ ಜೊತೆ ಸೇರಿ ತಿರುಚುವ ಕೆಲಸ ಮಾಡುತ್ತಿವೆ. ರಾಷ್ಟ್ರೀಯ ಪಕ್ಷಗಳ ಪರಿಸ್ಥಿತಿ ಬಗ್ಗೆ ಮಾಧ್ಯಮಗಳೇ ಹೇಳುತ್ತಿವೆ. ನಮಗೆ ಯಾವುದೇ ಆತಂಕ ಇಲ್ಲ. ನಮ್ಮ ಗುರಿ ಮುಟ್ಟಲೇಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಜನತೆ ವಿಶ್ವಾಸದಲ್ಲಿ ಸ್ವತಂತ್ರ ಸರಕಾರ ತರಬೇಕೆಂದು ನಾವು ಹೊರಟಿದ್ದೇವೆ ಎಂದು ಅವರು ಹೇಳಿದರು.

‘ನಮ್ಮ ಪಕ್ಷದ ಕೆಲವರು ಸಿದ್ದರಾಮಯ್ಯ ಅವರ ವಿಶ್ವಾಸದಲ್ಲಿ ಇರಬಹುದು. ಆದರೆ, ಅವರಲ್ಲೇ ಗೊಂದಲ ಇದೆ. ಆಷಾಢ ಮಾಸದ ನಂತರ ಅದು ಹೊರ ಬರುತ್ತದೆ. ದೇಶದಲ್ಲಿ ಮುಳುಗಿಹೋದ ಹಡಗಿನಲ್ಲಿ ಹೋದರೆ ಏನು ಪ್ರಯೋಜನ? ಕಾಂಗ್ರೆಸ್ ಎಲ್ಲ ಕಡೆ ಮುಳುಗುತ್ತಿದೆ. ವಾಸ್ತವಾಂಶ ಹೇಳುತ್ತಿದ್ದೇನೆ. 123ರ ನಮ್ಮ ಗುರಿಯಲ್ಲಿ ಹಲವು ಸಮಸ್ಯೆ, ಅಡೆತಡೆಗಳಿವೆ. ಇಲ್ಲ ಅಂತ ಹೇಳಲ್ಲ. ನಮ್ಮ ಗುರಿ ತಲುಪುವ ಕಡೆ ಗಮನ ಹರಿಸುತ್ತೇವೆ ಎಂದು ಅವರು ನುಡಿದರು.

ನಾಚಿಕೆಗೇಡು: ‘ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿ ದಾಳಿಯಿಂದ ಪ್ರಯೋಜನವಿಲ್ಲ. ಸಾವಿರಾರು ದಾಳಿ ಆಗಿದೆ. ಎಷ್ಟು ಜನರ ಮೇಲೆ ಕ್ರಮ ಆಗಿದೆ. ನ್ಯಾಯಾಲಯ, ಎಸಿಬಿ ಮುಖ್ಯಸ್ಥರೇ ಭ್ರಷ್ಟರು ಎಂದು ಹೇಳಿದೆ. ಇದಕ್ಕಿಂತ ನಾಚಿಕೆಪಡುವ ಪ್ರಸಂಗ ಮತ್ತೊಂದಿಲ್ಲ. ಎಡಿಜಿಪಿ ಅಧಿಕಾರಿಯೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಹೇಳಿದೆ' ಎಂದು ಬೇಸರ ವ್ಯಕ್ತಪಡಿಸಿದರು.

‘ದಾಳಿ ವೇಳೆ ಕೆಜಿ, ರಾಶಿಗಟ್ಟಲೆ ಚಿನ್ನ ಬೆಳ್ಳಿ ವಶಪಡಿಸಿಕೊಂಡಿರುವುದನ್ನು ತೋರಿಸಲಾಗುತ್ತದೆ. ಆದರೆ, ಭ್ರಷ್ಟ ಅಧಿಕಾರಿಗಳ ಮೇಲೆ ಯಾವುದಾದರೂ ಒಂದು ಕ್ರಮ ಆಗಿದೆಯಾ? ರಾಜಕಾರಣಿಗಳ ಮೇಲೆ ಅಥವಾ ಚಿಕ್ಕ ಪುಟ್ಟ ನೌಕರರು ಸಿಗುತ್ತಾರೆ. ಕಲಾಪದಲ್ಲಿ ಚರ್ಚೆ ಮಾಡಿದೆ. ಮಂಡ್ಯ, ರಾಮನಗರ ಪ್ರಾಧಿಕಾರದಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿದೆಯಲ್ಲಾ, ಒಂದು ರೂಪಾಯಿಯಾದ್ರೂ ವಾಪಸ್ ಬಂತಾ? ಸರಕಾರಿ ಭೂಮಿ ವಾಪಸ್ ಬಂತಾ? ಇದು ಈ ರಾಜ್ಯದ ವ್ಯವಸ್ಥೆ. ಇದೇನು ಆಶ್ವರ್ಯ ತರುವ ವಿಚಾರ ಅಲ್ಲ' ಎಂದು ನುಡಿದರು.

‘ಸಿದ್ದರಾಮಯ್ಯ ಸಿಎಂ ಆದಾಗ ಒಬ್ಬ ಐಎಎಸ್ ಅಧಿಕಾರಿ ಮನೆ ಮೇಲೆ ದಾಳಿಯಾಗಿ 5ಕೋಟಿ ರೂ. ವಶಪಡಿಸಿಕೊಳ್ಳಲಾಯಿತು. ಆ ಅಧಿಕಾರಿಯನ್ನು ಮನೆಗೆ ಕಳುಹಿಸಿದರಾ? ಕ್ರಮ ಕೈಗೊಳ್ಳುವ ಬದಲು ಉನ್ನತ ಹುದ್ದೆ ಕೊಟ್ಟರು. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಜನತೆ ಮುಂದೆ ಇಡುತ್ತೇವೆ. ಆದರೆ ನಾನು ಲೋಕಾಯುಕ್ತ, ಎಸಿಬಿ ಮುಚ್ಚಿ ಎಂದು ಹೇಳಲ್ಲ. ಆದರೆ, ಪ್ರಾಮಾಣಿಕ ಅಧಿಕಾರಿಗಳು ಇರಬೇಕಷ್ಟೆ. ಯಾರ ಹಸ್ತಕ್ಷೇಪ ಇಲ್ಲದಂತೆ ಅಧಿಕಾರಿಗಳು ಕೆಲಸ ಮಾಡಬೇಕು'

-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ


‘ಮೂರು ವರ್ಷ ಬಿಜೆಪಿ ಆಡಳಿತ ಹೇಗೆ ನಡೆಯುತ್ತಿದೆ ಎಂದು ಎಲ್ಲರೂ ಬಲ್ಲರು. ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ನೇಮಿಸಿ ಬಿಜೆಪಿ ಹೇಗೆಲ್ಲಾ ಆಡಳಿತ ನಡೆಸಿತು ಎನ್ನುವುದು ಗೊತ್ತಿದೆ. ಕಳಪೆ ಕಾಮಗಾರಿ, ಕೆಲಸ ಮಾಡದೇ ಹಣ ಲಪಟಾಯಿಸಿರುವ ಬಗ್ಗೆ ಮಾಹಿತಿ ಇದೆ. ಮಳೆಗಾಲದಲ್ಲಿ ಆಗುವ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಆದರೆ ಶಾಶ್ವತ ಪರಿಹಾರ ಇಲ್ಲ. ನಾನು ಸಿಎಂ ಆದಾಗ ಪುಟ್ಟೇನಹಳ್ಳಿ ಭಾಗದಲ್ಲಿ ಏನು ಕೆಲಸ ಮಾಡಿದೆ. ನಾನು ತೆಗೆದುಕೊಂಡ ನಿರ್ಧಾರ ಇಂದು ಎಂತಹ ಮಳೆ ಬಂದರು ಜೆ.ಪಿ.ನಗರದ ಜನ ಆರಾಮಾಗಿ ಇದ್ದಾರೆ. ಕೆರೆ ಒತ್ತುವರಿಯಿಂದ ಏನಾಗುತ್ತಿದೆ'

-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News