‘ಸಿದ್ದರಾಮೋತ್ಸವ'ವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಅಷ್ಟೇ: ಬಿಜೆಪಿ ಟೀಕೆ

Update: 2022-06-30 15:47 GMT

ಬೆಂಗಳೂರು, ಜೂ. 30: ‘ಮುಖ್ಯಮಂತ್ರಿ ಪದವಿಯ ಆಸೆಗಾಗಿ ಸಿದ್ದರಾಮಯ್ಯ ತಮ್ಮ ಹಳೆಯ ‘ಅಹಿಂದ ಕಾರ್ಡ್' ಬಳಸುತ್ತಿದ್ದಾರೆ. ಅಹಿಂದ ಕಾರ್ಡ್ ಎಕ್ಸ್‍ಪೈರ್ ಆಗಿದೆ. ಕಳೆದ ಬಾರಿ ಇದೇ ಕಾರ್ಡ್ ತೋರಿಸಿ ಮೋಸ ಮಾಡಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಇದು ‘ಸಿದ್ದರಾಮೋತ್ಸವ'ವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಅಷ್ಟೇ' ಎಂದು ಬಿಜೆಪಿ ಲೇವಡಿ ಮಾಡಿದೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ನಕಲಿ ಗಾಂಧಿ ಕುಟುಂಬಸ್ಥರು ಪ್ರತಿಬಾರಿಯೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ಒಂದಾಗಿರಬೇಕೆಂದು ಸೂಚನೆ ನೀಡುತ್ತಾರೆ. ದಿಲ್ಲಿಯಲ್ಲಿ ಹೂಂಗುಟ್ಟಿ ಬರುವ ಕಾಂಗ್ರೆಸ್ಸಿಗರು ಬೆಂಗಳೂರಿಗೆ ಬಂದ ಕೂಡಲೇ ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆಯುತ್ತಾರೆ. ತಾಳಮೇಳ ಇಲ್ಲದ ಕೈ ನಾಯಕರಿಂದಾಗಿಯೇ ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ' ಎಂದು ಎಚ್ಚರಿಕೆ ನೀಡಿದೆ.

‘ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು ಒಟ್ಟಾಗಿ ವಿಧಾನಸಭೆ ಚುನಾವಣೆ ಎದುರಿಸುವುದು ಎಂದರೆ ಕಪ್ಪೆಯನ್ನು ಹಿಡಿದು ತಕ್ಕಡಿಯಲ್ಲಿ ತೂಕ ಮಾಡಿದಂತೆ! ಇವರು ಒಟ್ಟಾಗುವುದಿಲ್ಲ, ಹೈಕಮಾಂಡ್ ಒಗ್ಗಟ್ಟಿನ ಜಪ ಬಿಡುವುದಿಲ್ಲ, ಕಾಂಗ್ರೆಸ್ ವರಿಷ್ಠರೀಗ ನೀರಲ್ಲಿ ಮುಳುಗಿ ಬಂದ ಬೆಕ್ಕಿನಂತಾಗಿದ್ದಾರೆ' ಎಂದು ಬಿಜೆಪಿ ಟೀಕಿಸಿದೆ.

‘2013ರ ಸೋಲನ್ನು ಡಾ.ಜಿ.ಪರಮೇಶ್ವರ್ ಮರೆತಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಸಿದ್ದರಾಮಯ್ಯ ಅವರೇ ನೀವು ಯಾರನ್ನೂ ಓವರ್‍ಟೇಕ್ ಮಾಡಿದರೂ ಕಾಂಗ್ರೆಸ್ ಒಳಜಗಳ ನಿಮ್ಮನ್ನು ಓವರ್‍ಟೇಕ್ ಮಾಡದೆ ಬಿಡದು. 2018ರಲ್ಲಿ ಅನುಭವಿಸಿದ್ದೀರಿ, 2023ರಲ್ಲಿ ಡಿಕೆಶಿ, ಖರ್ಗೆ, ಪರಮೇಶ್ವರ್ ಸೇರಿಕೊಂಡು ನಿಮ್ಮನ್ನು ಓವರ್‍ಟೇಕ್ ಮಾಡಲಿದ್ದಾರೆ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

‘ಕಾಂಗ್ರೆಸ್ಸಿಗರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುತ್ತಿದ್ದಾರೆ. ಮತವೇ ಇಲ್ಲದವರು ಬಹುಮತ ಗಳಿಸಲು ಹೇಗೆ ಸಾಧ್ಯ? 2023ರಲ್ಲಿ ಕಾಂಗ್ರೆಸ್ ಸೋಲು ಖಚಿತ. ಟವಲ್ ಈಗಲೇ ಹಾಕಬೇಡಿ, ನಾಳೆಯ ದಿನ ಮುಖಭಂಗವಾದಾಗ ಒರೆಸಿಕೊಳ್ಳಲು ತುಂಡು ಬಟ್ಟೆಯೂ ಲಭಿಸದು!' ಎಂದು ಬಿಜೆಪಿ ಇದೇ ವೇಳೆ ಭವಿಷ್ಯ ನುಡಿದಿದೆ.

‘ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲೆತ್ತಲು ‘ಸಿದ್ದರಾಮೊತ್ಸವ'ದ ಮೂಲಕ ವೇದಿಕೆ ಸಜ್ಜುಗೊಳಿಸುತ್ತಿರುವ ಸಿದ್ದರಾಮಯ್ಯ ಬಣದ ನಾಯಕರು ಒಂದೆಡೆಯಾದರೆ, ಇದೇ ಸಿದ್ದರಾಮಯ್ಯರನ್ನು ಕೆಡವಲು ಖೆಡ್ಡಾ ತೋಡುತ್ತಿರುವ ಡಿ.ಕೆ.ಶಿವಕುಮಾರ್ ಬಣದ ನಾಯಕರು ಮತ್ತೊಂದೆಡೆ. ಈ 2 ಬಣಗಳ ನಡುವೆ ದಿಲ್ಲಿಯ ನಕಲಿ ಗಾಂಧಿಗಳ ಬಣ ಮೂಕ ಪ್ರೇಕ್ಷಕರಷ್ಟೇ' ಎಂದು ಬಿಜೆಪಿ ವ್ಯಂಗ್ಯವಾಡಿದೆ.


‘ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹಿಂದೂಗಳು ಭಯದ ನೆರಳಲ್ಲಿ ಬದುಕುತ್ತಿದ್ದಾರೆ. ಕಾಶ್ಮೀರ, ಬಂಗಾಲ, ಕೇರಳ ಆಯ್ತು, ಈಗ ರಾಜಸ್ಥಾನದ ಸರದಿ. ಕಾಂಗ್ರೆಸ್ ವರಿಷ್ಠರಿಗೆ ಇನ್ನೆಷ್ಟು ಬಲಿ ಬೇಕು? ಉದಯಪುರ ಹತ್ಯೆ ಪ್ರಕರಣ ಕಾಂಗ್ರೆಸ್ಸಿಗರು ಟ್ವೀಟ್ ಮೂಲಕ ಕಣ್ಣೀರು ಸುರಿಸಿ ಸುಮ್ಮನಾಗುವ ಸಂಗತಿಯಲ್ಲ. ಕಾಂಗ್ರೆಸ್ ಸಮಾಧಾನ ಮಾಡುವ ವೈಖರಿ ಮಾತ್ರ ವಿಚಿತ್ರವಾಗಿದೆ!'

-ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News