ಟಿಪ್ಪು ಹೆಸರಿಲ್ಲದೆ ದೇಶದ ಸ್ವಾತಂತ್ರ್ಯ ಇತಿಹಾಸ ಅಪೂರ್ಣ: ಮೌಲಾನ ಶಾಫಿ ಸಅದಿ

Update: 2022-06-30 16:48 GMT
 ಶಾಫಿ ಸಅದಿ- ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ 

ಬೆಂಗಳೂರು, ಜೂ.30: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಾ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಏಕೈಕ ದೊರೆ ಮೈಸೂರು ಹುಲಿ ಟಿಪ್ಪು ಸುಲ್ತಾನ್. ಅವರ ಹೆಸರು, ತ್ಯಾಗ, ಬಲಿದಾನವನ್ನು ಪ್ರಸ್ತಾಪಿಸದಿದ್ದರೆ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಅಪೂರ್ಣವಾಗಿರುತ್ತದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗುಂಬದೆ ಶಾಹಿಯಲ್ಲಿರುವ ಟಿಪ್ಪುಸುಲ್ತಾನ್ ಅವರ ಸಮಾಧಿ ಸ್ಥಳದಲ್ಲಿ ಆಯೋಜಿಸಲಾಗಿದ್ದ 230ನೆ ಸಂದಲ್ ಉರೂಸ್ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ ರಾಜ. ಇಂತಹ ಉದಾಹರಣೆ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಅವರ ದೇಶ ಪ್ರೇಮದ ವಿಚಾರದಲ್ಲಿ ಹಲವರಿಗೆ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ಅವರು ಆವಿಷ್ಕರಿಸಿದ ರಾಕೆಟ್ ತಂತ್ರಜ್ಞಾನದ ಕುರಿತು ಬ್ರಿಟನ್‍ನಲ್ಲಿ ಸಂಶೋಧನೆ ನಡೆಯುತ್ತಿದೆ. ಅವರ ಸಾಧನೆಯಿಂದ ಇವತ್ತು ವಿದೇಶದವರು ಲಾಭ ಪಡೆಯುತ್ತಿದ್ದಾರೆ ಎಂದು ಶಾಫಿ ಸಅದಿ ಹೇಳಿದರು.

ನೈಜ ಮುಸ್ಲಿಮರು ಯಾವುದೆ ಸಂದರ್ಭದಲ್ಲಿಯೂ ಭಯೋತ್ಪಾದಕ ಅಥವಾ ಕೋಮು ವಿಭಜಕರಾಗಲು ಸಾಧ್ಯವಿಲ್ಲ. ಅದೇ ರೀತಿ, ಓರ್ವ ನೈಜ ಹಿಂದೂವು ಮುಸ್ಲಿಮ್ ವಿರೋಧಿಯಾಗಲಾರ. ಕೆಲವು ಸಮಾಜ ವಿದ್ರೋಹಿ ಶಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಒಡಕು ಮೂಡಿಸಿ, ಲಾಭ ಪಡೆಯಲು ಯತ್ನಿಸುತ್ತಿವೆ ಎಂದು ಅವರು ಕಿಡಿಗಾರಿದರು.

ಯಾವುದೆ ಧರ್ಮ ಹಿಂಸೆ, ದ್ವೇಷವನ್ನು ಬೋಧಿಸುವುದಿಲ್ಲ. ಸಹೋದರತೆ, ಪರಸ್ಪರ ಗೌರವ ನೀಡುವುದನ್ನು ಕಲಿಸುತ್ತದೆ. ಇದೇ ಅಂಶವನ್ನು ಟಿಪ್ಪು ಸುಲ್ತಾನ್ ತಮ್ಮ ಆಡಳಿತದಲ್ಲಿಯೂ ಅಳವಡಿಸಿಕೊಂಡಿದ್ದರು. ತಮ್ಮ ಸಾಮ್ರಾಜ್ಯದಲ್ಲಿದ್ದ ಎಲ್ಲ ಜಾತಿ, ಧರ್ಮಗಳ ಜನರನ್ನು ಸಮಾನವಾಗಿ ಕಾಣುತ್ತಿದ್ದರು. ಜಾತಿ, ಧರ್ಮದ ಆಧಾರದಲ್ಲಿ ಭೇದಭಾವ ಮಾಡುತ್ತಿರಲಿಲ್ಲ ಎಂದು ಶಾಫಿ ಸಅದಿ ಹೇಳಿದರು. 

ನಾವು ಸಹ ಒಂದಾಗಿ, ದೇಶ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ. ಅದೇ ನಾವು ಟಿಪ್ಪುಸುಲ್ತಾನ್ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ತನ್ವೀರ್ ಸೇಠ್, ಹಝ್ರತ್ ಟಿಪ್ಪು ಸುಲ್ತಾನ್ ಉರೂಸ್ ವೆಲ್ಫೇರ್ ಕಮಿಟಿ ಕಾರ್ಯದರ್ಶಿ ಅಫ್ರೋಝ್ ಪಾಷ, ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ, ಟಿಪ್ಪು ಸುಲ್ತಾನ್ ಸೆಕ್ಯುಲರ್ ಸೇನೆಯ ರಾಜ್ಯಾಧ್ಯಕ್ಷ ಯಾಸೀನ್ ಬಾಬಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News