ಹನೂರು: ಗರ್ಭಿಣಿಯನ್ನು 8 ಕಿ.ಮೀ. ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಗ್ರಾಮಸ್ಥರು

Update: 2022-07-01 04:33 GMT

ಹನೂರು: ದಟ್ಟಾರಣ್ಯದಲ್ಲಿ ಗರ್ಭಿಣಿಯನ್ನು ಡೋಲಿಯಲ್ಲಿ ಹೊತ್ತು 8 ಕಿ.ಮೀ. ದೂರ ನಡೆದು ಆಸ್ಪತ್ರೆಗೆ ದಾಖಲಿಸಿದ ಘಟನೆ ಮಹದೇಶ್ವರಬೆಟ್ಟ ಅರಣ್ಯ ವ್ಯಾಪ್ತಿಯ ದೊಡ್ಡಾಣೆ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ದೊಡ್ಡಾಣೆ ಗ್ರಾಮದ ಶಾಂತಲಾ ಎಂಬ ಮಹಿಳೆಗೆ ಮಧ್ಯರಾತ್ರಿ ಎರಡು ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆ ಸಮಯದಲ್ಲಿ ಕೇಂದ್ರಕ್ಕೆ ತಲುಪಿದ್ದಾರೆ. ಆಸ್ಪತ್ರೆ ಕರೆದೊಯ್ಯಲು ವಾಹನಸಿಗದ ಪರಿಣಾಮ ಗರ್ಭಿಣಿಯನ್ನು ಡೋಲಿಯಲ್ಲಿರಿಸಿ ಕಾಲ್ನಡಿಗೆ ಹೊರಟ ಗ್ರಾಮಸ್ಥರು ಬೆಳಗ್ಗೆ 6 ಗಂಟೆ ವೇಳೆಗೆ ಸುಳ್ಳಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿದ್ದಾರೆ. 

ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ದೊಡ್ಡಾಣೆ ಗ್ರಾಮಸ್ಥರು ಜನವನ ಸಾರಿಗೆ ವಾಹನ ಚಾಲಕರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಗ್ರಾಮಸ್ಥರು ಬೇರೆ ದಾರಿ ತೋಚದೆ ಡೋಲಿಯ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. 

► ಉಪಯೋಗಕ್ಕೆ ಸಿಗದ ಜನವನ ಸಾರಿಗೆ

ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದ ಗ್ರಾಮಸ್ಥರ ಅನುಕೂಲಕ್ಕಾಗಿ ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ತುರ್ತು ಬಳಕೆಗಾಗಿ ಅರಣ್ಯ ಇಲಾಖೆ 'ಜನವನ ಸಾರಿಗೆ ವ್ಯವಸ್ಥೆ ಆರಂಭಿಸಿದೆ. ಆದರೆ, ದೊಡ್ಡಾಣೆ ಗ್ರಾಮದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಜನವನ ಸಾರಿಗೆ ಇದ್ದೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News