ಪಬ್ಲಿಕ್‌ ಟಿ.ವಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದ ವ್ಯಕ್ತಿ!

Update: 2022-07-04 04:04 GMT

ಬೆಂಗಳೂರು: ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡುತ್ತಾ ವ್ಯಕ್ತಿಯೊಬ್ಬ  'ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ' ಎಂದು ಹೇಳಿದ್ದು ಸದ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ರಾಜಸ್ತಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಘಟನೆ ಕುರಿತು ಪಬ್ಲಿಕ್ ಟಿವಿಯಲ್ಲಿ  'ಕನ್ನಯ್ಯ ಲಾಲ್ ಪ್ರಕರಣದ ಬಗ್ಗೆ ಆಕ್ರೋಶ ಹೊರ ಹಾಕಿದ ಜನರು..!' ಎಂಬ ಶೀರ್ಷಿಕೆಯಲ್ಲಿ ಜನಾಭಿಪ್ರಾಯ ಕಾರ್ಯಕ್ರಮ ಪ್ರಸಾರಗೊಂಡಿತ್ತು. 

ಈ ಕಾರ್ಯಕ್ರಮದಲ್ಲಿ ದಾವಣಗೆರೆಯಿಂದ ಪಬ್ಲಿಕ್ ಟಿ.ವಿ.ಗೆ ಕರೆ ಮಾಡಿದ್ದ ವೀರಣ್ಣ ನಿರೂಪಕ ಅರುಣ್‌ ಬಡಿಗೇರ್‌ ಅವರ ಜೊತೆ ಮಾತನಾಡುತ್ತಾ ಮುಸ್ಲಿಮರು ಮತ್ತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ವಿರುದ್ಧ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. 

ವೀರಣ್ಣ ಅವರು ಹೇಳಿದ್ದು ಏನು? 

'ಮುಸಲ್ಮಾನರಿಗೆ ಯಾವುದೇ ರೀತಿಯ ಬೆಂಬಲ ಕೊಡಬಾರದು. ಪಬ್ಲಿಕ್‌ ಟಿ.ವಿ.ಗೆ ಮುಸಲ್ಮಾರನ್ನು ಕರೆಸಿ ಇದು ಮಾಡುತ್ತೀರಲ್ಲ, ಅದನ್ನು ಬಿಡಬೇಕು ಸರ್...  ಅವರಿಗೆ ಸ್ಥಾನ ಮಾನ ಕೊಡಬಾರದು. ಅವರಿಗೆ ಭಾರತ ದೇಶದಲ್ಲಿ ಯಾವುದೇ ಸ್ಥಾನಮಾನ ಕೊಡಬಾರದು. ಅನ್ನ ಹಾಕುವುದು ನಾವು ನೀರು ಹಾಕಿರುವವರು ನಾವು. ನಮ್ಮಮೇಲೆಯೇ ಬಾಲ ಬಿಚ್ಚುತ್ತಿದ್ದಾರಲ್ವಾ? ಎಷ್ಟು ಪೊಗರು ಸರ್ ಅವರಿಗೆ... ಫಸ್ಟ್‌ ಆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಗುಂಡಿಕ್ಕಿ ಹೊಡೆದರೆ ಇವರೆಲ್ಲ ಸುಮ್ಮನಾಗುತ್ತಾರೆ' ಎಂದು ವೀರಣ್ಣ ವಿಷಕಾರಿ ಮಾತುಗಳನ್ನಾಡಿದ್ದಾರೆ.

ನಿರೂಪಕ ಅರುಣ್  ಬಡಿಗೇರ್‌, ವೀರಣ್ಣ ಅವರ ಈ ವಿವಾದಾತ್ಮಕ ಮಾತಿಗೆ ಮೊದಲು ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ವೀರಣ್ಣ ಅವರೇ ನಾಯಕರ ವಿಚಾರದಲ್ಲಿ ಹಾಗೆಲ್ಲ ಮಾತನಾಡಬಾರದು ಸರ್.... ಅವರ ಮೇಲೆ ಕೋಪ ಇದೆ ಎಂದು ಹೀಗೆಲ್ಲ ಹೇಳಬಾರದು. ಹಂತಕರಿಗೂ ನಿಮಗೂ ವ್ಯತ್ಯಾಸ ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ. 

ಸದ್ಯ ವೀರಣ್ಣ ಅವರ ಹೇಳಿಕೆಗೆ  ಸಾಮಾಜಿ ಜಾಲತಾಣಗಳಲ್ಲಿ ಹಲವರು ಪ್ರತಿಕ್ರಿಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಮಾಧ್ಯಮದವರು ಇಂದು ಕಿರುಚುತ್ತಾ ಕೂಗುತ್ತಾ ಮತಾಂಧ ಶಕ್ತಿಗಳನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿರುವುದಕ್ಕೆ ಸ್ಪಷ್ಟ ಉದಾರಹಣೆ ಇದು. ಸಮಾಜದ ಶಾಂತಿ ಕೆಡಿಸಲೆಂದೆ ಕೆಲ ಮಾಧ್ಯಮಗಳು ಇಂದು ಕೆಲಸ ನಿರ್ವಹಿಸುತ್ತಿರುವಂತಿದೆ.  ಜನರು ತಪ್ಪು ಮಾತನಾಡಿದಾಗ ತಿದ್ದಬೇಕಾದ ಮಾಧ್ಯಮದವರು ಇಂತಹ ತಲೆ ಬರಹ ಕೊಟ್ಟಿರುವುದು ಅವರ ಹಿಂಸಾವಿನೋದಿ ಕೌರ್ಯ ಮನಸ್ಥಿತಿಯನ್ನು ತೋರಿಸಿದೆ. ನಿಸ್ಸಂಶಯವಾಗಿ ಇದು ಮಾಧ್ಯಮ ಭಯೋತ್ಪಾದಕತೆ' ಎಂದು ಲೇಖಕಿ ಚೈತ್ರಿಕಾ ಹರ್ಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.


'ಹಿಂದೂ ಮುಸ್ಲಿಂ ಸಂಘರ್ಷದ ಸೂಕ್ಷ್ಮತೆ ಅರಿವಿದ್ದ ಮಾಧ್ಯಮ ಇಂತಹ ವಿಚಾರದಲ್ಲಿ  ಜನಾಭಿಪ್ರಾಯ ಕೇಳುವ ಕೆಲಸ ಮಾಡಲ್ಲ. ತಲೆಕೆಟ್ಟ ಒಬ್ಬ ಹೀಗೆ ವಿರೋಧ ಪಕ್ಷದ ನಾಯಕರನ್ನು ಕೊಲ್ಲಬೇಕು ಎಂದು ಹೇಳಿದಾಗ ಆ ಕರೆ ಮಾಡಿದ ವ್ಯಕ್ತಿಗೆ ನೋಡಪ್ಪ ಹೀಗೆ ಹೇಳೋದು ಕಾನೂನಿನ ಉಲ್ಲಂಘನೆ, ಅದು ಮತ್ತಷ್ಟು ಸಂಘರ್ಷಕ್ಕೆ ಪ್ರಚೋದನೆ ಕೊಟ್ಟಂತೆ ಎಂದು ಮನವರಿಗೆ ಮಾಡಬೇಕಿತ್ತು. 

ಆದರೆ ಆತನ‌ ಹೇಳಿಕೆಯನ್ನೇ ಹೆಡ್ಡಿಂಗ್ ಹಾಕಿ ಪ್ರಸಾರ ಮಾಡುವ ಮೂಲಕ ಚಾನೆಲ್ ಆತನ ಹೇಳಿಕೆಗೆ ಬೆಂಬಲ ಸೂಚಿಸಿದೆ. ಈಗ ಈ ಚಾನೆಲ್ ವಿರುದ್ಧ ಪೊಲೀಸ್ ಇಲಾಖೆಯೇ ಕೇಸು ದಾಖಲಿಸಬೇಕು.  ಕಾಂಗ್ರೆಸ್ ಕೂಡಾ ದೂರು ಕೊಡಬೇಕು. ಈ ನಾಯಕರ ಕೊಲೆ ಆದರೆ ಅದರ ಹೊಣೆ ರಂಗನಾಥ ಮತ್ತು ಬಡಿಗೇರ ಹೊರುತ್ತಾರೆಯೇ? ಹಿಂದೆ ಕಲಬುರ್ಗಿಯವರ ವಿಚಾರದಲ್ಲಿ ಮಾಧ್ಯಮಗಳ ವರದಿ ಕೊಲೆಗೆ ಪ್ರೇರಣೆ ನೀಡಿದ್ದವು ಎಂಬ ಆರೋಪ ಕೇಳಿಬಂದಿತ್ತು.

ಕೆಲ ತಿಂಗಳ ಹಿಂದೆ ಅರುಣ್ ಬಡಿಗೇರ ಮತ್ತು ರಂಗನಾಥರ ವಿರುದ್ಧ ಜಾಮೀನುರಹಿತ ಸೆಕ್ಷನ್ ಅಡಿ FIR ದಾಖಲಾಗಿತ್ತು. ಅದರ ಕತೆ ಏನಾಯ್ತು?

ಮುಸ್ಲಿಂ ವ್ಯಕ್ತಿಗಳು ಹಿಂದೂಗಳನ್ನು ಕೊಂದಾಗ ಕೆರಳುವ ಹಿಂದೂ ಸಮಾಜ, ಹಿಂದೂಗಳು ಮುಸ್ಲಿಮರ ಕೊಲೆ ಮಾಡಿದಾಗ ಅವರಿಗೆ ಷಹಬ್ಬಾಸ್ ಹೇಳುವುದು, ಸನ್ಮಾನ ಮಾಡುವುದನ್ನು ಯಾಕೆ ವಿರೋಧಿಸಲ್ಲ? 

ನರಗುಂದರ ಮುಸ್ಲಿಂ ಯುವಕನನ್ನು ಬಜರಂಗಿಗಳು ಕೊಂದರಲ್ಲ, ಧರ್ಮಸ್ಥಳದ ದಲಿತ  ದಿನೇಶನನ್ನು ಬಜರಂಗಿಯೊಬ್ಬ ಕೊಂದನಲ್ಲ, ಬಜರಂಗಿ ಶಂಭೂಲಾಲ್ ಕೇಸರಿಶಾಲು, ನಾಮ‌ ಹಾಕೊಂಡು ಮುಸ್ಲಿಂ ಯುವಕನಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಅದರ ವಿಡಿಯೋ ಮಾಡಿ ಸಂಭ್ರಮಿಸಿದನಲ್ಲ ಆಗ ಟಿವಿಯವರು ಜನಾಭಿಪ್ರಾಯ ಕೇಳಿದರೇ? ಎಂದು ಇಮಾಮ್ ಗೊಡೆಕಾರ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಪಬ್ಲಿಕ್ ಟಿ.ವಿ ಎಂಬ ಚಾನೆಲ್ ಉಗ್ರಗಾಮಿಗಳಿಗೆ ಯಾವ ರೀತಿ ಕುಮ್ಮಕ್ಕು, ಪ್ರೋತ್ಸಾಹ,ಪ್ರ ಚೋದನೆಯನ್ನು ಕೊಡುತ್ತಿದೆ ಎನ್ನುವುದಕ್ಕೆ ಸಾಕ್ಷಿ ಇದು ಎಂದು ಮಂಜು ಸುವರ್ಣ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News