ಬಾಬಾಬುಡಾನ್ ಗಿರಿಯಲ್ಲಿ ಪೂಜೆ | ಉಪಸಮಿತಿ ವರದಿಗೆ ಸಂಪುಟ ಸಭೆ ಅನುಮೋದನೆ: ಸಚಿವ ಮಾಧುಸ್ವಾಮಿ

Update: 2022-07-01 14:25 GMT

ಬೆಂಗಳೂರು, ಜು. 1: ಚಿಕ್ಕಮಗಳೂರಿನ ‘ಬಾಬಾಬುಡಾನ್ ಗಿರಿ ಇನಾಂ ದತ್ತಾತ್ರೇಯ ಪೀಠ'ದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಸಂಬಂಧ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ನೇತೃತ್ವದ ಸಂಪುಟ ಉಪಸಮಿತಿ ವರದಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡನೆ ಮಾಡಿದ್ದು, ಅದಕ್ಕೆ ಒಪ್ಪಿಗೆ ನೀಡಲಾಗಿದೆ. ಸಂಪುಟ ಉಪಸಮಿತಿ ವರದಿಯಲ್ಲಿನ ಶಿಫಾರಸುಗಳನ್ನು ಹೈಕೋರ್ಟ್‍ಗೆ ಸಲ್ಲಿಸಲು ಸಂಪುಟ ಸಭೆ ತೀರ್ಮಾನಿಸಿದೆ' ಎಂದು ಕಾನೂನು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2018ರ ಮಾರ್ಚ್ 19ರಂದು ಅಂದಿನ ರಾಜ್ಯ ಸರಕಾರ ಬಾಬಾಬುಡಾನ್ ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ‘ಮುಜಾವರ್' ನೇಮಕ ಮಾಡಿ ಆದೇಶ ಹೊರಡಿಸಿತ್ತು. ಸರಕಾರದ ಆದೇಶವನ್ನು ಶ್ರೀಗುರು ದತ್ತಾತ್ರೇಯ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರಕಾರದ ಆದೇಶವನ್ನು ರದ್ದುಪಡಿಸಿ 2021ರ ಫೆ.28ರಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‍ದಾಸ್ ಸಮಿತಿಯ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪ್ರಕರಣವನ್ನು ಕಾನೂನು ರೀತಿ ಹೊಸದಾಗಿ ಪರಿಶೀಲಿಸಬೇಕೆಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು. ಹೀಗಾಗಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಮುಜಾವರ್ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್ ಆದೇಶ ಪಾಲನೆ ಮಾಡಲು ಸರಕಾರ ಮೂವರು ಸಚಿವರನ್ನೊಳಗೊಂಡ ಸಂಪುಟದ ಉಪ ಸಮಿತಿ ರಚಿಸಿತ್ತು. ಉಪ ಸಮಿತಿಯಲ್ಲಿ ಕಾನೂನು, ಗೃಹ ಹಾಗೂ ಮುಜರಾಯಿ ಇಲಾಖೆ ಸಚಿವರಿದ್ದರು. ಈ ಸಮಿತಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಎರಡೂ ಕಡೆಯ ಸಂಬಂಧಪಟ್ಟವರ ಜತೆ ಸಮಾಲೋಚನೆ ನಡೆಸಿ, ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಆರು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೈಕೋರ್ಟ್‍ಗೆ ಸರಕಾರ ಮನವಿ ಮಾಡಿತ್ತು.

ಹೀಗಾಗಿ ಹೈಕೋರ್ಟ್ ಪ್ರಕರಣದ ವಿಚಾರಣೆ ಆರು ವಾರಗಳ ಕಾಲ ಮುಂದೂಡಲಾಗಿತ್ತು. ಹೀಗಾಗಿ ಇಂದು ನಡೆದ ಸಂಪುಟ ಸಭೆಯಲ್ಲಿ ವಿವಾದಿತ ಬಾಬಾಬುಡಾನ್ ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ‘ಪೂಜಾಕೈಂಕರ್ಯ'ಗಳನ್ನು ಕೈಗೊಳ್ಳುವ ವಿಚಾರ ಸಂಬಂಧ ಸಂಪುಟ ಉಪಸಮಿತಿಯ ವರದಿಯ ಶಿಫಾರಸ್ಸಿಗೆ ಸಂಪುಟ ಒಪ್ಪಿಗೆ ನೀಡಿದೆ.

‘ಬಾಬಾಬುಡಾನ್‍ಗಿರಿಯಲ್ಲಿ ವಾರ್ಷಿಕವಾಗಿ ಧಾರ್ಮಿಕ ಕಾರ್ಯಕ್ರಮಗಳ ದಿನಚರಿ ರೂಪಿಸಲು ವ್ಯವಸ್ಥಾಪನಾ ಸಮಿತಿಗೆ ಹೊಣೆ ನೀಡುವುದು, ಊರುಸ್ ಮತ್ತು ಪೂಜೆ ಸಲ್ಲಿಸಲು ಮೇಲ್ವಿಚಾರಣೆ ಹಾಗೂ ಹಿಂದೂ-ಮುಸ್ಲಿಂ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲು ಎರಡು ಸಮುದಾಯಕ್ಕೆ ಅವಕಾಶ ಕಲ್ಪಿಸುವ ಕುರಿತು ಸಂಪುಟ ಉಪಸಮಿತಿ ವರದಿ ಮಹತ್ವದ ಶಿಫಾರಸ್ಸುಗಳನ್ನು ಮಾಡಿದ್ದು, ಹೈಕೋರ್ಟ್‍ಗೆ ವರದಿ ಮಂಡಿಸಲಿದೆ' ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News