‘ಜಲಜೀವನ್ ಮಿಷನ್' ಅಡಿ ಗ್ರಾಮೀಣ ಜನವಸತಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಸಂಪುಟ ಒಪ್ಪಿಗೆ

Update: 2022-07-01 14:45 GMT

ಬೆಂಗಳೂರು, ಜು. 1: ‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ‘ಜಲಜೀವನ್ ಮಿಷನ್ ಯೋಜನೆ'ಯಡಿ ಸುಮಾರು 4,200ಕೋಟಿ ರೂ.ಗಳಿಗೂ ಅಧಿಕ ಮೊತ್ತದಲ್ಲಿ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ'ಗಳ ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.  ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಯಾದಗಿರಿ ಜಿಲ್ಲೆ ಎಲ್ಲ ಗ್ರಾಮೀಣ ಜನ ವಸತಿಗಳಿಗೆ ಹಾಗೂ ಕಕ್ಕೇರಾ, ಕೆಂಭಾವಿ ಮತ್ತು ಹುಣಸಗಿ ಪಟ್ಟಣಗಳಿಗೆ 2,054 ಕೋಟಿ ರೂ.ವೆಚ್ಚದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ' ಎಂದು ತಿಳಿಸಿದರು.

ಶುಕ್ರವಾರ  ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಯಾದಗಿರಿ ಜಿಲ್ಲೆ ಎಲ್ಲ ಗ್ರಾಮೀಣ ಜನ ವಸತಿಗಳಿಗೆ ಹಾಗೂ ಕಕ್ಕೇರಾ, ಕೆಂಭಾವಿ ಮತ್ತು ಹುಣಸಗಿ ಪಟ್ಟಣಗಳಿಗೆ 2,054 ಕೋಟಿ ರೂ.ವೆಚ್ಚದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ' ಎಂದು ತಿಳಿಸಿದರು.

‘ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ, ಸಿಂಧಗಿ ತಾಲೂಕಿನ ಎಲ್ಲ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ 1385 ಕೋಟಿ ರೂ., ಕೊಪ್ಪಳ ಜಿಲ್ಲೆಗೆ 150 ಕೋಟಿ ರೂ.ಯೋಜನೆಗಳಿಗೆ ಹಾಗೂ ಬೀದರ್ ಜಿಲ್ಲೆಯ ಭಾಲ್ಕಿ ವ್ಯಾಪ್ತಿಯ ಜನವಸತಿ ಪ್ರದೇಶಗಳಿಗೆ 124 ಕೋಟಿ ರೂ.ಸೇರಿದಂತೆ ಒಟ್ಟು 4,260 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ನ್ಯಾಯಾಲಯ ಸಂಕೀರ್ಣ ನಿರ್ಮಾಣ: ‘ಬೆಳಗಾವಿಯ ಚಿಕ್ಕೋಡಿಯಲ್ಲಿ 32 ಕೋಟಿ ರೂ., ಚಿಕ್ಕಮಗಳೂರಿನ ಮೂಡಿಗೆರೆಗೆ 11 ಕೋಟಿ ರೂ., ಚಿಕ್ಕಮಗಳೂರಿನಲ್ಲಿ 28 ಕೋಟಿ ರೂ., ಕೋಲಾರ ಜಿಲ್ಲಾ ನ್ಯಾಯಾಲಯಕ್ಕೆ 25 ಕೋಟಿ ರೂ., ಶ್ರೀನಿವಾಸಪುರ ಕೋರ್ಟ್ ಸಂಕಿರ್ಣಕ್ಕೆ 12 ಕೋಟಿ ರೂ., ಬಳ್ಳಾರಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 121 ಕೋಟಿ ರೂ., ಕುಂದಗೋಳದಲ್ಲಿ ಕೋರ್ಟ್ ಕಟ್ಟಡಕ್ಕೆ 32 ಕೋಟಿ ರೂ. ಸೇರಿದಂತೆ ಹೊಸ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ' ಎಂದು ಅವರು ಹೇಳಿದರು.

ಕಂಚಿನ ಪುತ್ಥಳಿಗೆ 10 ಕೋಟಿ ರೂ.: ‘ಚಿತ್ರದುರ್ಗದ ಶ್ರೀ ಮುರುಘಾಮಠದ ಆವರಣದಲ್ಲಿ 325 ಅಡಿ ಎತ್ತರದ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 30 ಕೋಟಿ ರೂ.ಅನುದಾನ ಘೋಷಿಸಿದ್ದು, 20 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿತ್ತು. ಇದೀಗ 10 ಕೋಟಿ ರೂ.ಗಳನ್ನು ನೀಡಿದ್ದು, ಬಿಡುಗಡೆ ಮಾಡಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ' ಎಂದು ಮಾಧುಸ್ವಾಮಿ ತಿಳಿಸಿದರು.

ನಿರಾಣಿ ಶುಗರ್ಸ್‍ಗೆ ಬಡ್ಡಿ ರಹಿತ ಸಾಲ: ‘ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ‘ನಿರಾಣಿ ಶುಗರ್ಸ್'ಗೆ ಲೀಸ್ ನೀಡಲಾಗಿತ್ತು. ಕಾರ್ಖಾನೆ ಲಾಭದಾಯಕವಲ್ಲದ ಕಾರಣ 24 ಕೋಟಿ ರೂ. ಮುದ್ರಾಂಕ ಶುಲ್ಕವನ್ನು ಸರಕಾರವೇ ಬಡ್ಡಿ ರಹಿತವಾಗಿ ಸಾಲದ ರೂಪದಲ್ಲಿ ನೀಡಲು ಸಂಪುಟ ಒಪ್ಪಿಗೆ ನೀಡಿದ್ದು, ಆ ಮೊತ್ತವನ್ನು ನಿರಾಣಿ ಶುಗರ್ಸ್ ಹತ್ತು ವರ್ಷಗಳಲ್ಲಿ ಸರಕಾರಕ್ಕೆ ಹಿಂದಿರುಗಿಸಬೇಕೆಂಬ ಷರತ್ತು ವಿಧಿಸಲಾಗಿದೆ' ಎಂದು ಮಾಧುಸ್ವಾಮಿ ವಿವರ ನೀಡಿದರು.

ಕುಡಿಯುವ ನೀರಿನ ಯೋಜನೆ: ಉಳ್ಳಾಲ ನಗರಸಭೆ ವ್ಯಾಪ್ತಿಯ ಕೋಟಿಕಾರ್ ಪಟ್ಟಣ ಪಂಚಾಯಿತಿಯ ಸೋಮಶ್ವರ ಪುರಸಭೆ ಹಾಗೂ ಮಾರ್ಗಮಧ್ಯೆ ಬರುವ 24 ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ 249.48 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.


ಮುಂದಿನ ತಿಂಗಳ ಅಧಿವೇಶನ: ‘ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ನಡೆಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಮುಂದಿನ ತಿಂಗಳಲ್ಲಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ದಿನಾಂಕವನ್ನು ನಿಗದಿಪಡಿಸಲಾಗುವುದು'

-ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News