ಕೊರೋನ ಸಂದರ್ಭದಲ್ಲಿ ಎರಡು ಬಾರಿ ಶುಲ್ಕ ಸಂಗ್ರಹಿಸಿದ ಖಾಸಗಿ ಆಸ್ಪತ್ರೆಗಳಿಂದ ಹಣ ವಸೂಲಿಗೆ ಕ್ರಮ: ಸಚಿವ ಸುಧಾಕರ್

Update: 2022-07-01 15:44 GMT

ಬೆಂಗಳೂರು, ಜು.1: ಕೊರೋನ ಸಂದರ್ಭದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಿ, ರೋಗಿಗಳಿಂದ ಹಾಗೂ ಸರಕಾರದಿಂದ ಹಣ ಪಡೆದಿವೆ. ಅಂತಹ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಹಣ ವಸೂಲಿ ಮಾಡಿ, ರೋಗಿಗಳ ಕುಟುಂಬಕ್ಕೆ ಹಣ ವಾಪಸ್ ಕೊಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಶುಕ್ರವಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯಕೀಯ ವೃತ್ತಿ ಅತ್ಯಂತ ಪುಣ್ಯದ ಕೆಲಸವಾಗಿದ್ದು, ಅದೃಷ್ಟವಂತರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ವೈದ್ಯರ ಸೇವೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಇಂತಹ ವೃತ್ತಿಯನ್ನು ಸಮರ್ಪಣಾ ಮನೋಭಾವದಿಂದ ಮಾಡಬೇಕು ಎಂದರು.

ವೈದ್ಯರು ವೃತ್ತಿಪರರಾಗಿದ್ದಾಗ ಸಮಾಜ ಅವರನ್ನು ಗುರುತಿಸಿ ಗೌರವಿಸುತ್ತದೆ. ವೈದ್ಯರು ಕೇವಲ ಔಷಧಿ ಮಾತ್ರ ಕೊಡುವುದಿಲ್ಲ, ಬದಲಾಗಿ ರೋಗಿಯನ್ನು ಅಂತಃಕರಣದಿಂದ ಆರೈಕೆ ಮಾಡುತ್ತಾರೆ. ವೈದ್ಯರಿಗೆ ಪ್ರತಿದಿನದ ಕಲಿಕೆ ಮುಖ್ಯ. ವೈದ್ಯರು ನಿರಂತರ ಅಧ್ಯಯನ ಮಾಡಿದರೆ ಮಾತ್ರ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯ. ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಸಮರ್ಪಣೆಯಿಂದ ಕೆಲಸ ಮಾಡಬೇಕೆ ಹೊರತು, ಟೈಮ್‍ಪಾಸ್ ಅಥವಾ ಪರ್ಯಾಯ ಎಂದು ಭಾವಿಸಬಾರದು ಎಂದು ಅವರು ಹೇಳಿದರು.

ಸಂಜೆ ಖಾಸಗಿ ಪ್ರಾಕ್ಟಿಸ್ ಮಾಡಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ, ಕೆಲ ವೈದ್ಯರು ಮಾಡುವ ಮೌಲ್ಯ ರಹಿತ ಕಾರ್ಯಗಳಿಂದ ಇಡೀ ವೈದ್ಯಲೋಕಕ್ಕೆ ಕೆಟ್ಟ ಹೆಸರು ಬರುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ವೈದ್ಯರಿಗೆ ಇದರಿಂದ ನೋವಾಗುತ್ತದೆ. ಯಾರಾದರೂ ವೈದ್ಯರಿಗೆ ಸಂಪೂರ್ಣವಾಗಿ ಖಾಸಗಿ ಕ್ಷೇತ್ರದಲ್ಲೇ ತೊಡಗಿಸಿಕೊಳ್ಳಬೇಕು ಎಂಬ ಮನಸ್ಸಿದ್ದರೆ ಅವರು ಸ್ವತಂತ್ರರಾಗಿದ್ದಾರೆ ಎಂದು ಸುಧಾಕರ್ ತಿಳಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಸದ್ಯ ವೈದ್ಯರ ಕೊರತೆ ಇಲ್ಲ. ಆದರೆ ಕೆಲ ವೈದ್ಯರಿಂದ ಹಾಜರಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹಾಗಾಗಿದೆ. ವೈದ್ಯರ ಮೇಲೆ ಯಾರೂ ನಿಗಾ ಇಡಬಾರದು. ವೈದ್ಯರನ್ನು ಅನುಮಾನದಿಂದ ನೋಡಿದರೆ ಆ ವೃತ್ತಿಗೆ ಅಪಮಾನವಾಗುತ್ತದೆ. ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬಹಳ ನೋವಿನಿಂದ ಜಾರಿಗೆ ತರುವಂತಾಗಿದೆ ಎಂದು ಅವರು ಹೇಳಿದರು.

ಆಸ್ಪತ್ರೆಯಲ್ಲಿ ರೋಗಿಗೆ ನೀಡುವ ಚಿಕಿತ್ಸೆ ಎಷ್ಟು ಮುಖ್ಯವೋ, ಆಸ್ಪತ್ರೆಯ ನಿರ್ವಹಣೆಯೂ ಅಷ್ಟೇ  ಮುಖ್ಯ. ಆಗ ಮಾತ್ರ ಆರೋಗ್ಯ ಸೇವೆಗಳಲ್ಲಿ ದಕ್ಷತೆ, ಗುಣಮಟ್ಟ, ವೃತ್ತಿಪರತೆ ಕಾಯ್ದುಕೊಳ್ಳಲು ಸಾಧ್ಯ. ವೈದ್ಯರು ಆಯುಷ್ಯವನ್ನು ವೃದ್ಧಿ ಮಾಡಲು, ನೋವನ್ನು ನಿವಾರಣೆ ಮಾಡಲು ಸಾಧ್ಯ. ಭಗವಂತ ಈ ಶಕ್ತಿಯನ್ನು ಕೇವಲ ವೈದ್ಯರಿಗೆ ಮಾತ್ರ ಕೊಟ್ಟಿದ್ದಾನೆ ಎಂದು ಸುಧಾಕರ್ ತಿಳಿಸಿದರು.

ಡಾ.ಬಿ.ಸಿ.ರಾಯ್ ಜನ್ಮಶತಮಾನೋತ್ಸವದ ಅಂಗವಾಗಿ ಇಡೀ ದೇಶದಲ್ಲಿ ವೈದ್ಯರ ದಿನಾಚರಣೆ ನಡೆಯುತ್ತಿದೆ. ರಾಜ್ಯ ಸರಕಾರ ಕೂಡ ಅರ್ಥಪೂರ್ಣ ಆಚರಣೆಗೆ ಸಿದ್ಧವಾಗಿದೆ. ಜು.7 ರಂದು ವಿಧಾನಸೌಧದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಹಾಗೂ ಗಣನೀಯ ಸೇವೆ ಮಾಡಿದವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಎಲ್ಲ ವೈದ್ಯರು ಆಡಳಿತದಲ್ಲಿ ಪರಿಣತಿ ಪಡೆಯಬೇಕು. ಅದಕ್ಕಾಗಿ ಡಾಕ್ಟರ್ಸ್ ಹೆಲ್ತ್ ಕೇರ್ ಮ್ಯಾನೇಜ್ಮೆಂಟ್ ಆರಂಭಿಸಿದ್ದೇವೆ. ಹೆಲ್ತ್ ವರ್ಕರ್ಸ್ ಕೂಡ ವೃತ್ತಿಪರರಾಗಿ ಬೆಳೆಯಬೇಕು ಎಂದು ಅವರು ಕರೆ ನೀಡಿದರು.

ಕೋವಿಡ್ ಬಂದ ಮೇಲೆ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಯಿತು. ಕೋವಿಡ್ ಬಳಿಕ 10 ವರ್ಷದಲ್ಲಿ ಆಗುವಂತಹ ಬೆಳವಣಿಗೆ ಒಂದು ವರ್ಷದಲ್ಲಿ ಆಗಿದೆ. 2020ಕ್ಕೆ ಹೋಲಿಸಿದರೆ ಈಗ ಹೆಚ್ಚುವರಿಯಾಗಿ 4,000 ವೈದ್ಯರು ಕೆಲಸ ಮಾಡುತ್ತಿದ್ದಾರೆ. ಸರಕಾರ ವೈದ್ಯರ ನೇಮಕಾತಿ ಹಾಗೂ ಮೂಲಭೂತ ಸೌಕರ್ಯ, ಸೌಲಭ್ಯಗಳನ್ನು ಹೆಚ್ಚು ಮಾಡುತ್ತಿದೆ. ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಆರಂಭವಾಗಬೇಕು. ಆದರೆ ಅದಕ್ಕೂ ಮೊದಲು ಗುಣಮಟ್ಟದಲ್ಲಿ ಬದಲಾವಣೆ ತರಬೇಕು. ವೈದ್ಯರ ಮೇಲೆ ಯಾರೇ ಹಲ್ಲೆ ಮಾಡಿದರೂ ಅದು ಅಕ್ಷಮ್ಯ ಅಪರಾಧ. ವೈದ್ಯರ ಮೇಲೆ ಹಲ್ಲೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸುಧಾಕರ್ ಎಚ್ಚರಿಕೆ ನೀಡಿದರು. 

ಮಾಸ್ಕ್ ಧರಿಸಿ

ಬೆಂಗಳೂರಿನಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಮಾಸ್ಕ್ ಧರಿಸಬೇಕು. ಜೊತೆಗೆ ಸರಕಾರದ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News