ಪೌರ ಕಾರ್ಮಿಕರಿಗೆ ಮಾಸಿಕ 2 ಸಾವಿರ ರೂ.ಸಂಕಷ್ಟ ಭತ್ತೆ ನೀಡಲು ಸಂಪುಟ ಒಪ್ಪಿಗೆ

Update: 2022-07-01 16:54 GMT

ಬೆಂಗಳೂರು, ಜು. 1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸೇರಿದಂತೆ ರಾಜ್ಯದಲ್ಲಿನ ಪೌರ ಕಾರ್ಮಿಕರಿಗೆ 2022-23ನೆ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವಂತೆ ಮಾಸಿಕ 2 ಸಾವಿರ ರೂಪಾಯಿ ‘ಸಂಕಷ್ಟ ಭತ್ತೆ' ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಶನಿವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ಮಾಡಲಾಗಿದೆ. ‘ಪೌರ ಕಾರ್ಮಿಕರಿಗೆ ಕ್ಲಿಷ್ಟಕರ ಹಾಗೂ ಅಪಾಯಕಾರಿ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೌರ ಕಾರ್ಮಿಕರಿಗೆ ಮಾಸಿಕ 2 ಸಾವಿರ ರೂ. ಸಂಕಷ್ಟ ಭತ್ತೆಯನ್ನು ಘೋಷಣೆ ಮಾಡಲಾಗಿತ್ತು' ಎಂದು ಕಾನೂನು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿನ ಎಲ್ಲ ಪೌರ ಕಾರ್ಮಿಕರಿಗೆ ಮಾಸಿಕ 2 ಸಾವಿರ ರೂ.ಸಂಕಷ್ಟ ಭತ್ತೆಯನ್ನು ನೀಡಲಾಗುವುದು. ಎಷ್ಟು ಮಂದಿ ಪೌರ ಕಾರ್ಮಿಕರಿಗೆ ಈ ಭತ್ತೆ ನೀಡಬೇಕಾಗುತ್ತದೆ ಮತ್ತು ಎಷ್ಟು ಮೊತ್ತದ ವೆಚ್ಚವಾಗಲಿದೆ ಎಂಬ ಅಂದಾಜು ವಿವರಗಳು ಸದ್ಯಕ್ಕೆ ಇಲ್ಲ. ಬಜೆಟ್‍ನಲ್ಲಿ ಘೋಷಣೆ ಮಾಡಿದಂತೆ ಆ ಸಮುದಾಯಕ್ಕೆ ನೀಡಲು ನಿರ್ಧರಿಸಲಾಗಿದೆ' ಎಂದು ಮಾಧುಸ್ವಾಮಿ ತಿಳಿಸಿದರು.

‘ಪೌರ ಕಾರ್ಮಿಕರ ಪ್ರತಿಭಟನೆಗೂ ಸಚಿವ ಸಂಪುಟದ ತೀರ್ಮಾನಕ್ಕೂ ಯಾವುದೇ ಸಂಬಂಧವಿಲ್ಲ. ಈ ಹಿಂದೆಯೇ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಅವರಿಗೆ ಸಂಕಷ್ಟ ಭತ್ತೆ ನೀಡಲು ಒಪ್ಪಿಗೆ ನೀಡಲಾಗಿದೆ. ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಪೌರ ಕಾರ್ಮಿಕರಿಗೆ ಇದರಿಂದ ಲಾಭವಾಗಲಿದೆ' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News