ಸಿದ್ದರಾಮಯ್ಯ, ಡಿಕೆಶಿಗೆ ಕೊಲೆ ಬೆದರಿಕೆ ಪ್ರಕರಣ; ಸ್ಪಷ್ಟನೆ ನೀಡಿದ ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್

Update: 2022-07-01 18:33 GMT

ಬೆಂಗಳೂರು:  ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಪಬ್ಲಿಕ್ ಟಿವಿಯ ನೇರಪ್ರಸಾರ ಕಾರ್ಯಕ್ರಮವೊಂದರಲ್ಲಿ ವೀಕ್ಷಕರೊಬ್ಬರು ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಸಂಬಂಧ ದೂರು ಕೂಡ ದಾಖಲಾಗಿದೆ. 

ಇದೀಗ ಈ ವಿಚಾರಕ್ಕೆ ಸಂಬಂಧಿಸಿ ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್ ಸ್ಪಷ್ಟನೆ ನೀಡಿದ್ದಾರೆ. 

'ಒಬ್ಬ ನಿರೂಪಕನಾಗಿ ನಾನಾಗಲಿ ಅಥವಾ ನಮ್ಮ ಮ್ಯಾನೇಜ್ ಮೆಂಟ್ ಆಗಲಿ ಇಂಥ ಹೇಳಿಕೆಗಳನ್ನು ಪ್ರೋತ್ಸಾಹಿಸುವಂತ ಮಾತೇ ಇಲ್ಲ' ಎಂದು ಅರುಣ್ ಬಡಿಗೇರ್ ಹೇಳಿದ್ದಾರೆ. 

ಅರುಣ್ ಬಡಿಗೇರ್ ಸ್ಪಷ್ಟನೆ ಏನು ? 

ನಿನ್ನೆ ಸಂಜೆ (ಗುರುವಾರ) 5ರಿಂದ 6 ಗಂಟೆಗೆ ಕನ್ನಯ್ಯಲಾಲ್ ಹತ್ಯೆಗೆ ಸಂಬಂಧಪಟ್ಟಂತೆ ಜನಾಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ನಾವು ನೇರಪ್ರಸಾರದಲ್ಲಿ ಫೋನ್ ಇನ್ ಕಾರ್ಯಕ್ರಮವನ್ನು ಮಾಡಿದ್ದೆವು. 

ಈ ನೇರ ಪ್ರಸಾರದಲ್ಲಿ ದಾವಣಗರೆಯಿಂದ ವೀರಣ್ಣ ಎಂಬವರು ಕರೆ ಮಾಡಿ ವಿಧಾನಸಭೆ ವಿರೋಧ ಪಕ್ಷದ ನಾಯದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಂಡಿಕ್ಕಿ ಕೊಳ್ಳಬೇಕು ಎಂಬ ಮಾತನ್ನು ಹೇಳುತ್ತಾರೆ. ಅದನ್ನು ನಾವು ಅಲ್ಲಿಗೆ ಕಟ್ ಮಾಡುವಂತ ಪ್ರಯತ್ನವನ್ನು ಮಾಡಿದ್ದೇವೆ. ಮತ್ತು ಇದು ತಾಲಿಬಾನ್ ಸಂಸ್ಕೃತಿ ಅಲ್ಲ ಎಂದೂ ಹೇಳಿದ್ದೇವೆ.  ಇಂತದಕ್ಕೆ ನಾನೊಬ್ಬ ನಿರೂಪಕನಾಗಿ ಯಾವುದೇ ಕಾರಣಕ್ಕೂ ಪ್ರೋತ್ಸಾಹ ನೀಡುವುದಿಲ್ಲ. ಜೊತೆಗೆ ನಮ್ಮ ಮ್ಯಾನೇಜ್ ಮೆಂಟ್ ಕೂಡ ಪ್ರೋತ್ಸಾಹಿಸುವಂತ ಮಾತೇ ಇಲ್ಲ. ಈ ಸಂಬಂಧ ಖಾಸಗಿ ದೂರು ಕೂಡ ಸಲ್ಲಿಕೆಯಾಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

--------------------------

ವೀರಣ್ಣ ಅವರು ಹೇಳಿದ್ದು ಏನು? 

'ಮುಸಲ್ಮಾನರಿಗೆ ಯಾವುದೇ ರೀತಿಯ ಬೆಂಬಲ ಕೊಡಬಾರದು. ಪಬ್ಲಿಕ್‌ ಟಿ.ವಿ.ಗೆ ಮುಸಲ್ಮಾರನ್ನು ಕರೆಸಿ ಇದು ಮಾಡುತ್ತೀರಲ್ಲ, ಅದನ್ನು ಬಿಡಬೇಕು ಸರ್...  ಅವರಿಗೆ ಸ್ಥಾನ ಮಾನ ಕೊಡಬಾರದು. ಅವರಿಗೆ ಭಾರತ ದೇಶದಲ್ಲಿ ಯಾವುದೇ ಸ್ಥಾನಮಾನ ಕೊಡಬಾರದು. ಅನ್ನ ಹಾಕುವುದು ನಾವು ನೀರು ಹಾಕಿರುವವರು ನಾವು. ನಮ್ಮಮೇಲೆಯೇ ಬಾಲ ಬಿಚ್ಚುತ್ತಿದ್ದಾರಲ್ವಾ? ಎಷ್ಟು ಪೊಗರು ಸರ್ ಅವರಿಗೆ... ಫಸ್ಟ್‌ ಆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಗುಂಡಿಕ್ಕಿ ಹೊಡೆದರೆ ಇವರೆಲ್ಲ ಸುಮ್ಮನಾಗುತ್ತಾರೆ' ಎಂದು ವೀರಣ್ಣ ವಿಷಕಾರಿ ಮಾತುಗಳನ್ನಾಡಿದ್ದರು.

ನಿರೂಪಕ ಅರುಣ್  ಬಡಿಗೇರ್‌, ವೀರಣ್ಣ ಅವರ ಈ ವಿವಾದಾತ್ಮಕ ಮಾತಿಗೆ ಮೊದಲು ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ವೀರಣ್ಣ ಅವರೇ ನಾಯಕರ ವಿಚಾರದಲ್ಲಿ ಹಾಗೆಲ್ಲ ಮಾತನಾಡಬಾರದು ಸರ್.... ಅವರ ಮೇಲೆ ಕೋಪ ಇದೆ ಎಂದು ಹೀಗೆಲ್ಲ ಹೇಳಬಾರದು. ಹಂತಕರಿಗೂ ನಿಮಗೂ ವ್ಯತ್ಯಾಸ ಏನಿದೆ? ಎಂದು ಪ್ರಶ್ನೆ ಮಾಡಿದ್ದರು. ಬಳಿಕ ಈ ವಿಡಿಯೋ  ಸಾಮಾಜಿಕ ಜಾಲತಾಣದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಅರುಣ್ ಬಡಿಗೇರ್, ವೀರಣ್ಣ ಹಾಗೂ ಪಬ್ಲಿಕ್ ಟಿವಿಯ ಫೇಸ್ ಬುಕ್ ಪುಟದ ಅಡ್ಮಿನ್ ವಿರುದ್ಧ ಬೆಂಗಳೂರು ನಗರದ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದ್‌ರಾಜ್ ದೂರು ದಾಖಲಿಸಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News