ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ!

Update: 2022-07-02 02:21 GMT
Photo: Twitter/@balgovind7777

ಹೊಸದಿಲ್ಲಿ: ವಿಮಾನಯಾನದಲ್ಲಿ ಆಹಾರ ಹಾಗೂ ಪಾನೀಯಗಳು ದುಬಾರಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ರೈಲು ಪ್ರಯಾಣದ ವೇಳೆ ಆಹಾರ ಅಗ್ಗ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ರೈಲು ಪ್ರಯಾಣಿಕರೊಬ್ಬರು ಚಹಾವೊಂದಕ್ಕೆ 70 ರೂಪಾಯಿ ಪಾವತಿಸಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರ ಪ್ರಕಾರ ಚಹಾದ ಬೆಲೆ 20 ರೂಪಾಯಿ ಹಾಗೂ ಸೇವಾ ಶುಲ್ಕ 50 ರೂಪಾಯಿ!

ದೆಹಲಿಯಿಂದ ಭೋಪಾಲ್‍ಗೆ ಜೂನ್ 28ರಂದು ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ವೇಳೆ ಪ್ರಯಾಣಿಕರ ಜೇಬಿಗೆ ಬಿಸಿ ತಟ್ಟಿದೆ. ತೆರಿಗೆ ಇನ್‍ವೈಸ್‍ಗಳ ಫೋಟೊ ಟ್ವಿಟ್ಟರ್ ಮತ್ತು ರೆಡ್ಡಿಟ್‍ನಲ್ಲಿ ವೈರಲ್ ಆಗಿದೆ.

ಆದರೆ ರೈಲ್ವೆ ಇಲಾಖೆಯ ಪ್ರಕಾರ, ಪ್ರಯಾಣಿಕರು ತಮ್ಮ ಟಿಕೆಟ್ ಕಾಯ್ದಿರಿಸುವ ವೇಳೆ ಆಹಾರವನ್ನು ಕೂಡಾ ಬುಕ್ಕಿಂಗ್ ಮಾಡದೇ, ಪ್ರಯಾಣದ ವೇಳೆ ಆಹಾರಕ್ಕಾಗಿ ಮನವಿ ಮಾಡಿದರೆ 50 ರೂಪಾಯಿ ಸೇವಾ ಶುಲ್ಕ ವಿಧಿಸಲಾಗುತ್ತದೆ. ಈ ಸಂಬಂಧ 2018ರಲ್ಲೇ ಸುತ್ತೋಲೆ ಹೊರಡಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಈ ಸುತ್ತೋಲೆಯ ಪ್ರಕಾರ ಶತಾಬ್ದಿ ಮತ್ತು ರಾಜಧಾನಿ ರೈಲಿನಲ್ಲಿ ಪ್ರಯಾಣದ ವೇಳೆ ಪ್ರಯಾಣಿಕರು ಆಹಾರ, ಕಾಫಿ ಅಥವಾ ಚಹಾಕ್ಕಾಗಿ ಕೋರಿಕೆ ಸಲ್ಲಿಸಿದರೆ, 50 ರೂಪಾಯಿ ಸೇವಾ ಶುಲ್ಕ ವಿಧಿಸಲಾಗುತ್ತದೆ. ಈ ಮೊದಲು ಶತಾಬ್ದಿ ಹಾಗೂ ರಾಜಧಾನಿ ರೈಲುಗಳಲ್ಲಿ ಆಹಾರ ಉಚಿತವಾಗಿತ್ತು. ಆದರೆ ಇದೀಗ ದರ ಕಡಿತಗೊಳಿಸಲಾಗಿದ್ದು, ಪ್ರಯಾಣದ ವೇಳೆ ಊಟಕ್ಕೆ ಕೂಡಾ ಬುಕ್ಕಿಂಗ್ ಮಾಡಿ ಅದರ ಶುಲ್ಕವನ್ನು ಪ್ರಯಾಣಿಕರು ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News