ತೆಂಕನಿಡಿಯೂರು ಕಾಲೇಜು ಎನ್ನೆಸ್ಸೆಸ್ ವಾರ್ಷಿಕ ಶಿಬಿರ ಸಂಪನ್ನ

Update: 2022-07-02 13:31 GMT

ಉಡುಪಿ : ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಗರಡಿಮಜಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವಾರ ಕಾಲ ನಡೆದು ಸಂಪನ್ನಗೊಂಡಿತು. 

ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಸಮಾರೋಪ ಭಾಷಣ ಮಾಡಿ, ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಲಿತ ಉತ್ತಮ ವಿಚಾರಗಳನ್ನು ಶಿಬಿರಾರ್ಥಿಗಳು ಜೀವನದುದ್ದಕ್ಕೂ ಪಾಲಿಸಿದಾಗ ಶಿಬಿರ ಸಾರ್ಥಕವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ನಾವು ಕಲಿತ ನಾಯಕತ್ವದ ಗುಣಗಳು ಭವಿಷ್ಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಪ್ರಯೋಜನಕ್ಕೆ ಬರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಮಾದಕ ವ್ಯಸನ, ದುಶ್ಚಟಗಳಿಗೆ ಬಲಿಯಾಗದೆ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ನಾವೆಲ್ಲರೂ ಕೈಗೋಡಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದರು. ಗರಡಿಮಜಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ರತಿ ಎಸ್., ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ, ಎನ್ನೆಸ್ಸೆಸ್  ಯೋಜನಾಧಿಕಾರಿಗಳಾದ ಸುಷ್ಮಾ ಟಿ. ಹಾಗೂ ಡಾ.ಮಹೇಶ್ ಕುಮಾರ್ ಕೆ.ಇ., ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ. ಉದಯ ಶೆಟ್ಟಿ ಕೆ. ಉಪಸ್ಥಿತರಿದ್ದರು.

ಶಿಬಿರಾರ್ಥಿ ಪ್ರಶಾಂತಿ ಕಾರ್ಯಕ್ರಮ ನಿರೂಪಿಸಿ, ಶಿಬಿರಾಧಿಕಾರಿ ಡಾ. ಮಹೇಶ್ ಕುಮಾರ್ ಕೆ.ಇ. ಶಿಬಿರದ ವರದಿ ಮಂಡಿಸಿದರು.  ಶಿಬಿರಾಧಿಕಾರಿ  ಸುಷ್ಮಾ ಟಿ. ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News