ಅಪ್ರಯೋಜಕ ಸಚಿವರಿಂದ ಶಿಕ್ಷಣ ಕ್ಷೇತ್ರ ಅಧ್ವಾನ: ಬಿ.ಕೆ. ಹರಿಪ್ರಸಾದ್

Update: 2022-07-02 15:37 GMT
 ಬಿ.ಕೆ. ಹರಿಪ್ರಸಾದ್

ಬೆಂಗಳೂರು, ಜು. 2: ‘ದೇಶಕ್ಕೆ ಮಾದರಿಯಾಗಬೇಕಿದ್ದ ಶಿಕ್ಷಣ ಇಲಾಖೆಯನ್ನ ವಿವಾದಿತ ಕೇಂದ್ರವನ್ನಾಗಿಸಿದ ಕೀರ್ತಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‍ಗೆ ಸಲ್ಲಬೇಕು. ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ನಾಡಿನ ಸಾಂಸ್ಕೃತಿಕ ನಾಯಕರಿಗೆ ಅಪಮಾನ ಮಾಡಿ ದೇಶದ ಎದುರು ಮಾನ ಕಳೆಯುವಂತೆ ಮಾಡಿದ್ದು ಸಾಲದು. ಪರಿಷ್ಕರಣೆಯ ಬಗ್ಗೆ ಬಂದಿರುವ ಆಕ್ಷೇಪಗಳಿಗೆ ಉತ್ತರ ನೀಡುವ ಎದೆಗಾರಿಕೆಯೂ ಇಲ್ಲ' ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ದೂರಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಶಿಕ್ಷಣ ಇಲಾಖೆಯಲ್ಲಿ ದಿನಕ್ಕೊಂದು ಅವಾಂತರ, ಹಗರಣಗಳು ಧಾರಾವಾಹಿಯಂತೆ ಕಂತುಗಳಲ್ಲಿ ಬರುತ್ತಿವೆ. ಈಗ ಇಡೀ ಇಲಾಖೆ ಭಿಕ್ಷೆ ಬೇಡುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇಂತಹ ಅಪ್ರಯೋಜಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರಿಂದ ಶಿಕ್ಷಣ ಇಲಾಖೆ ಅಧ್ವಾನದ ಕೂಪವಾಗಿದೆ' ಎಂದು ವಾಗ್ದಾಳಿ ನಡೆಸಿದರು.

‘ಶಾಲೆಗಳು ಪ್ರಾರಂಭವಾಗುವ ಮುನ್ನ ಪೂರ್ವಯೋಜಿತ ತಯಾರಿಗಳೊಂದಿಗೆ ಪ್ರಾರಂಭಿಸಲಾಗುತ್ತೆ. ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು, ಶಿಥಿಲಗೊಂಡಿರುವ ಕೊಠಡಿಗಳ ದುರಸ್ಥಿಗೆ ಹಣ ಬಿಡುಗಡೆ, ಶಾಲಾ ಮಕ್ಕಳಿಗೆ ಶೂಗಳನ್ನ ನೀಡುವುದು ಸೇರಿ ಮೂಲ ಸೌಕರ್ಯಗಳ ತಯಾರಿಗಳೊಂದಿಗೆ ಪ್ರಾರಂಭ ಮಾಡಲಾಗುತ್ತೆ. ಆದರೆ, ಶಿಕ್ಷಣ ಇಲಾಖೆ ಹಾಗೂ ಸಚಿವರು ಕೇವಲ ಪಠ್ಯ ಪರಿಷ್ಕರಣೆ ನೆಪದಲ್ಲಿಯೇ ಕಾಲ ಕಳೆಯುತ್ತಿವೆ' ಎಂದು ಟೀಕಿಸಿದರು.

‘ರಾಜ್ಯದಲ್ಲಿ 75,675 ಶಾಲೆಗಳ ಕೊಠಡಿಗಳನ್ನ ದುರಸ್ಥಿ ಮಾಡಬೇಕಾಗಿದ್ದು, 2,682 ಕೋಟಿ ರೂ.ಹಣ ವ್ಯಯ ಮಾಡಬೇಕಿದೆ ಎಂದು ಶಿಕ್ಷಣ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾಪನೆ ಸಲ್ಲಿಸಿದೆ. ಸಾವಿರಾರು ಶಾಲೆಗಳು ಶಿಥಿಲಗೊಂಡಿರುವ ಮಾಹಿತಿ ಮೊದಲೇ ಇದ್ದರು ಶಿಕ್ಷಣ ಇಲಾಖೆ ಶಾಲೆಗಳು ಪ್ರಾರಂಭವಾಗುವ ಮುನ್ನವೇ ಎಚ್ಚೆತ್ತುಕೊಂಡು ಕ್ರಿಯಾ ಯೋಜನೆ ಯಾಕೆ ರೂಪಿಸಲಿಲ್ಲ? ಶೇ.40ರಷ್ಟು ಕಮಿಷನ್ ವ್ಯವಹಾರದ ಮಾತುಕತೆ ಇನ್ನೂ ಮುಗಿದಿರಲಿಲ್ವಾ?' ಎಂದು ಅವರು ದೂರಿದರು.

‘ಬಡ ಮಕ್ಕಳಿಗೆ ಶೂ ಕೊಡಲು ಯೋಗ್ಯತೆ ಇಲ್ಲದ ಮಂತ್ರಿ ಅಪ್ರಯೋಜಕರು. ಶಿಕ್ಷಣ ಇಲಾಖೆಯನ್ನ ವಿವಾದಿತ ಕೇಂದ್ರವನ್ನಾಗಿ ಮಾಡಿದ್ದಾರೆ. ಶಿಕ್ಷಣ ಇಲಾಖೆಯನ್ನ ನಿಭಾಯಿಸಲು ಶಕ್ತರಲ್ಲದ ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆ ನೀಡಿಬೇಕೆಂದು ಒತ್ತಾಯಿಸುತ್ತೇನೆ' ಎಂದು ಹರಿಪ್ರಸಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News