ಚಿಕ್ಕಮಗಳೂರು ನಗರಸಭೆಯಿಂದ ಇಂದಿರಾನಗರದಲ್ಲಿ 20ಕ್ಕೂ ಹೆಚ್ಚು ಮನೆಗಳ ತೆರವು

Update: 2022-07-02 16:21 GMT

ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯಲ್ಲಿರುವ ಇಂದಿರಾನಗರ ಬಡಾವಣೆಯಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿರುವವರಿಗೆ ತೆರವಿಗೆ ನೋಟಿಸ್ ನೀಡಿದ್ದರೂ ತೆರವು ಮಾಡಿಲ್ಲ ಎಂದು ಆರೋಪಿಸಿ ನಗರಸಭೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಬಡಾವಣೆಯಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಗುಡಿಸಲುಗಳು ಹಾಗೂ ಮನೆಗಳನ್ನು ಜೆಸಿಬಿಗಳ ಮೂಲಕ ನೆಲಸಮ ಮಾಡಿದ ಘಟನೆ ಶನಿವಾರ ವರದಿಯಾಗಿದೆ.

ಈ ವೇಳೆ ಮನೆಗಳ ಮಾಲಕರು, ಅಧಿಕಾರಿಗಳು ಹಾಗೂ ತೆರವು ಕಾರ್ಯಾಚರಣೆ ತಡೆಯಲು ಮುಂದಾಗಿದ್ದ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ವಿರೋಧ ಲೆಕ್ಕಿಸದೆ ನಗರಸಭೆ ಅಧಿಕಾರಿಗಳು ಅಕ್ರಮ ಶೆಡ್ ಹಾಗೂ ಕೆಲ ನಿರ್ಮಾಣ ಹಂತದ ಮನೆಗಳನ್ನು ಕೆಡವಿದ್ದರಿಂದ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ್ದ ಮನೆಗಳನ್ನು ಕಳೆದುಕೊಂಡ ಮನೆ ಮಾಲಕರು ಎದೆಬಡಿದುಕೊಂಡು ಗೋಳಿಡುತ್ತಿದ್ದು, ತಮ್ಮ ಮನೆ ಕೆಡವಲು ಬಂದಿದ್ದ ಜೆಸಿಬಿ ಮೇಲೆ ನಿಂತು ಜೆಸಿಬಿಯನ್ನು ತನ್ನ ಮೇಲೆ ಹರಿಸುವಂತೆ ಮನೆ ಮಾಲಕರೋರ್ವರು ಪಟ್ಟು ಹಿಡಿದಿದ್ದ ಘಟನೆಯೂ ನಡೆಯಿತು.

ನಗರಸಭೆ ಅಧ್ಯಕ್ಷ ವೇಣುಗೋಪಾಲ್, ಪೌರಾಯುಕ್ತ ಬಸವರಾಜ್ ಪೊಲೀಸರ ಭದ್ರತೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ಇಂದಿರಾನಗರ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಶೆಡ್‌ಗಳು ಹಾಗೂ ಕೆಲ ನಿರ್ಮಾಣ ಹಂತದ ಮನೆಗಳ ತೆರವಿಗೆ ಮುಂದಾಗಿದ್ದರು. ಶೆಡ್ ಹಾಗೂ ಮನೆಗಳ ತೆರವಿಗೆ ಮುಂದಾಗುತ್ತಿದ್ದಂತೆ ನಿವಾಸಿಗಳು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಕೆಲ ನಿವಾಸಿಗಳು ಆಕ್ರೋಶಗೊಂಡು ಜೆಸಿಬಿ ತಡೆದು ಪ್ರತಿಭಟಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೆ.ಮುಹಮ್ಮದ್ ಅಧಿಕಾರಿಗಳ ಕಾರ್ಯಾಚರಣೆಗೆ ತಡೆಯೊಡ್ಡಿ, ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಿ ತೆರವು ಕಾರ್ಯಾಚರಣೆ ನಿಲ್ಲಿಸಬೇಕೆಂದು ಮನವಿ ಮಾಡಿದರು. ಆದರೂ ನಗರಸಭೆ ಅಧಿಕಾರಿಗಳು 20ಕ್ಕೂ ಹೆಚ್ಚು ಶೆಡ್‌ಗಳನ್ನು ತೆರವು ಮಾಡಿದರು. ಅಲ್ಲದೆ ನಿರ್ಮಾಣ ಹಂತದ ಕೆಲ ಮನೆಗಳನ್ನೂ ಧ್ವಂಸ ಮಾಡಿದರು.

ಈ ವೇಳೆ ಮಾತನಾಡಿದ ವೇಣುಗೋಪಾಲ್, ನಗರಸಭೆ ಅನುಮತಿ ಪಡೆಯದೆ ಅಕ್ರಮವಾಗಿ ಆಶ್ರಯ ಮನೆಗಳಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಫಲಾನುಭವಿಗಳಲ್ಲದವರು ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ಇಂತಹ ಮನೆಗಳನ್ನು ಗುರತಿಸಿ ಈ ಹಿಂದೆಯೇ ನೋಟಿಸ್ ನೀಡಿ ತೆರವಿಗೆ ಸೂಚನೆ ನೀಡಲಾಗಿತ್ತು. ತೆರವು ಮಾಡದ ಹಿನ್ನೆಲೆಯಲ್ಲಿ ಶನಿವಾರ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಮನೆಗಳನ್ನು ತೆರವುಗೊಳಿಸಲಾಗಿದೆ. ನಗರಸಭೆಯಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ 94ಸಿಸಿಯಲ್ಲಿ ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ಸಂಗ್ರಹಿಸಿ ಅವರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಕಾರ್ಯಾಚರಣೆ ನಡೆಯುವ ಸಮಯದಲ್ಲಿ ಸರಕಾರಿ ಅಧಿಕಾರಿಗಳ ಕೆಲಸಕ್ಕೆ ಕೆಲವರು ಅಡ್ಡಿಪಡಿಸಿ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಸದಸ್ಯರಾದ ರಾಜೇಶ್, ನವೀನ್, ನಗರಸಭೆಯ ಇಂಜಿನಿಯರ್ ರಶ್ಮಿ, ಎಇಇ ಕುಮಾರ್, ಚಂದನ್, ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಮತ್ತಿತರರಿದ್ದರು.

ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಬಡವರು, ಅಲ್ಪಸಂಖ್ಯಾತರ ಗುರಿಯಾಗಿಟ್ಟುಕೊಂಡು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ಸೂಚನೆ ನೀಡದೆ ಏಕಾಏಕಿ ಮಳೆಗಾಲದಲ್ಲಿ ಈ ರೀತಿಯ ಕಾರ್ಯಾಚರಣೆ ನಡೆಸುತ್ತಿರುವುದು ನಗರಸಭೆಯ ಅಮಾನವೀಯತೆಗೆ ಸಾಕ್ಷಿಯಾಗಿದೆ. ಕಾಲಾವಕಾಶ ನೀಡುವಂತೆ ಕೋರಿದರೂ ಅಧಿಕಾರಿಗಳು ಅವಕಾಶ ನೀಡದೆ ಬಡವರ ಮನೆಗಳ ಮೇಲೆ ಜೆಸಿಬಿ ಹರಿಸಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ರೂಪಿಸಲಿದೆ.
ಎಚ್.ಪಿ. ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ನಗರಸಭೆ ತೆರವು ಖಂಡಿಸಿ ಸಂತ್ರಸ್ತರಿಂದ ಪ್ರತಿಭಟನೆ

ನಗರಸಭೆಯಿಂದ ನೋಟಿಸ್ ನೀಡದೆ ಬಡವರ ಮನೆಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಿ ಇಂದಿರಾನಗರ ಬಡಾವಣೆಯ ನಿವಾಸಿಗಳು ಶನಿವಾರ ಎಸ್‌ಡಿಪಿಐ ನೇತೃತ್ವದಲ್ಲಿ ಇಂದಿರಾನಗರ ಬಡಾವಣೆಯಿಂದ ಸುಮಾರು 1 ಕಿ.ಮೀ. ಕಾಲ್ನಡಿಗೆಯಲ್ಲಿ ಆಝಾದ್ ಪಾರ್ಕ್‌ವರೆಗೆ ಬಂದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್, ನಗರಸಭೆ ಆಡಳಿತ ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿ ಜೆಸಿಬಿಗಳ ಮೂಲಕ ಬಡವರ ಮನೆಗಳನ್ನು ಧ್ವಂಸ ಮಾಡುತ್ತಿದೆ. ಮಳೆಯ ನಡುವೆಯೂ ಮನೆಯಲ್ಲಿದ್ದ ಮಹಿಳೆಯರು ಹಾಗೂ ಮಕ್ಕಳ ಮೇಲೆ ಕರುಣೆ ಇಲ್ಲದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನೆಗಳನ್ನು ಕೆಡವಿ ವಿಕೃತಿ ಮೆರೆದಿದ್ದಾರೆ. ಮನೆಯಲ್ಲಿದ್ದ ಸಾಮಾನು, ಸರಂಜಾಮುಗಳನ್ನೂ ಮುಟ್ಟಲು ಬಿಡದೆ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ನಗರಸಭೆ ಸದಸ್ಯೆ ಮಂಜುಳಾ ಶ್ರೀನಿವಾಸ್, ಎಸ್‌ಡಿಪಿಐ ಮುಖಂಡರು, ಬಡಾವಣೆ ನಿವಾಸಿಗಳು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಇಂದಿರಾನಗರ ಬಡಾವಣೆಯಲ್ಲಿ ಬಡವರ ಮನೆಗಳ ಮೇಲೆ ನಗರಸಭೆ ಆಡಳಿತ ಹಾಗೂ ಅಧಿಕಾರಿಗಳು ಅಕ್ರಮವಾಗಿ ಜೆಸಿಬಿ ಹರಿಸಿ ಧ್ವಂಸ ಮಾಡಿದ್ದಾರೆ. ಮಾನವೀಯತೆ ಇಲ್ಲದೇ ಬಡವರ ಮನೆಗಳನ್ನು ಕೆಡವಿದ್ದಾರೆ. ಮನೆಗಳ ದಾಖಲೆ ಪತ್ರಗಳನ್ನು ತೋರಿಸಿದರೂ ಪರಿಶೀಲಿಸದೇ ಮನೆ, ಶೆಡ್‌ಗಳನ್ನು ಕೆಡವಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಪರಿಶೀಲಿಸಿ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
ಗೌಸ್ ಮುನೀರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News