ದಲಿತ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ ಮೀಸಲಾತಿ ಇಂದಿಗೂ ಸಿಕ್ಕಿಲ್ಲ: ಕೋಟಿಗಾನಹಳ್ಳಿ ರಾಮಯ್ಯ

Update: 2022-07-02 17:05 GMT

ಕೋಲಾರ: ದಲಿತ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಮಾತ್ರ ಸಿಕ್ಕಿದೆ ಆದರೆ ಶೈಕ್ಷಣಿಕ ಮತ್ತು ಸಾಮಾಜಿಕ ಮೀಸಲಾತಿ ಇಂದಿಗೂ ಸಿಕ್ಕಿಲ್ಲ, ಹಾಗಾಗಿ ತಳಸಮುದಾಯಗಳು ಒಗ್ಗಟ್ಟಾಗಲೇಬೇಕಾಗಿದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಕರೆ ನೀಡಿದರು. 

ಕರ್ನಾಟಕ ಸ್ವಾಭಿಮಾನಿ ಎಸ್. ಸಿ. ಎಸ್. ಟಿ. ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಅಭಿವೃದ್ಧಿ ಮೀಸಲಾತಿ ನೀತಿ ಜಾರಿಗೊಳಿಸದೆ ಉಳ್ಳವರ ಪರ ಆಳುವ ದೊರೆಗಳು ಇಂದು ದೇಶವನ್ನೇ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಶೋಷಿತರ ಉದ್ದಾರಕ್ಕಾಗಿರುವ ಮೀಸಲಾತಿ ಸೌಲಭ್ಯಗಳನ್ನು ಪಡೆದು ಅಧಿಕಾರಕ್ಕೇರಿದ ಜನಪ್ರತಿನಿಧಿಗಳಿಗೆ ಸಮುದಾಯ ಏಳಿಗೆಗಿಂತ ಪಕ್ಷ ನಿಷ್ಟೆ ಎಂಬ ಗುಲಾಮಗಿರಿ ದೊಡ್ಡದಾಗಿದೆ ಹಾಗಾಗಿ 1930ರಲ್ಲಿ ಪೂನಾ ಒಪ್ಪಂದದಿಂದ ಕಳೆದುಕೊಂಡ ಪ್ರತ್ಯೇಕ ಮತದಾನ ಹಕ್ಕು ಮರಳಿ ಪಡೆಯಲು ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು. 

ಒಕ್ಕೂಟದ ಸದಸ್ಯರಾದ ಹೆಬ್ಬಾಳ ವೆಂಕಟೇಶ್ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಗೊಳಿಸಲು ಆಗ್ರಹಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗೆ ಜುಲೈ 11ರಂದು ಮುತ್ತಿಗೆ ಹಾಕಲು ಕರೆ ನೀಡಲಾಗಿದ್ದು ಕೋಲಾರದಲ್ಲೂ ಹೋರಾಟ ನಡೆಯಲಿದೆ ಎಂದು ತಿಳಿಸಿದರು. 

ಮತ್ತೋರ್ವ ಸದಸ್ಯ ವಾಲ್ಮೀಕಿ ಮುಖಂಡ ನರಸಿಂಹಯ್ಯ ಮಾತನಾಡಿ, ಮೀಸಲಾತಿ ಹೆಚ್ಚಳದ ವಿಷಯದಲ್ಲಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಕಾರ್ಯರೂಪಕ್ಕೆ ತರದೆ ನಿರ್ಲಕ್ಷ್ಯ ಭಾವನೆ ತೋರಿದ ಸರ್ಕಾರದ ವರ್ತನೆಗೆ ಬೇಸತ್ತು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳು ಕಳೆದ ಫೆಬ್ರುವರಿ 10 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾತ್ರಿ ಹಗಲು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ರಾಜ್ಯದ ಅಸಂಖ್ಯಾತ ಪ್ರಗತಿಪರ ಸಂಘಟನೆಗಳಿಂದ, ವಿರೋಧ ಪಕ್ಷಗಳ ಮುಖಂಡರಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಯತಿಯಾಗಿ ಖುದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೋರಾಟ ಸ್ಥಳಕ್ಕೆ ಬೇಟಿ ನೀಡಿ ಕೊಟ್ಟ ಭರವಸೆಗಳು ಈಡೇರದ ಕಾರಣ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಪ್ರಜಾವಿಮೋಚನ ಚಳುವಳಿಯ ಮುನಿಆಂಜಿನಪ್ಪ, ಅರ್. ಪಿ. ಐ. ಅಂಬರೀಷ್, ಮುನಿಯಪ್ಪ, ಶ್ರೀನಿವಾಸ, ನಾಗರಾಜ, ರಮೇಶ್, ಆನಂದ್ ಮುಂತಾದವರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News