ಸ್ವಾತಂತ್ರ್ಯ ಅಮೃತ ಮಹೋತ್ಸವ- ‘ಹರ್ ಘರ್ ತಿರಂಗಾ' ಕಾರ್ಯಕ್ರಮ: ಸುತ್ತೋಲೆ

Update: 2022-07-03 15:33 GMT
photo- pti 

ಬೆಂಗಳೂರು, ಜು. 3: ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರಕಾರ ಆ. 11ರಿಂದ 17ರ ವರೆಗೆ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ' ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಮತ್ತು ಕಾಲೇಜು ಹಾಗೂ ತಾಂತ್ರಿಕ ಶಿಕ್ಷ ಇಲಾಖೆಗಳ ವ್ಯಾಪ್ತಿಯಲ್ಲಿ(ಡಿಸಿಟಿಇ)  ಯಶಸ್ವಿಗೊಳಿಸಲು ಸುತ್ತೋಲೆ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಹರ್ ಘರ್ ತಿರಂಗಾ' ಅಭಿಯಾನದಡಿ ದೇಶದ ಮನೆ ಮನೆಯಲ್ಲೂ ರಾಷ್ಟ್ರಧ್ಜಜ ಹಾರಿಸಿ ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಕರೆ ಕೊಡಲಾಗಿದೆ. ಇದಕ್ಕೆ ಪೂರಕವಾಗಿ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ವಿಶ್ವ ವಿದ್ಯಾನಿಲಯಗಳು, ಡಿಸಿಟಿಇಗೆ ಒಳಪಡುವ ಸರಕಾರಿ/ಅನುದಾನಿತ/ಅನುದಾನರಹಿತ ಪದವಿ ಕಾಲೇಜುಗಳು ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಇದು ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

‘ತರಗತಿಗಳ ಸಮಯದಲ್ಲಿ ಈ ಬಗ್ಗೆ ತಿಳಿಸಬೇಕು, ಸೂಚನಾ ಫಲಕಗಳಲ್ಲಿ ಮಾಹಿತಿ ಹಾಕಬೇಕು, ಆಯಾ ಕಾಲೇಜುಗಳ ವಾಹನಗಳ ಮೇಲೆ ಧ್ವಜ ಅಳವಡಿಸಲು ತಿಳಿಸಬೇಕು ಹಾಗೂ ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿ ವಾರದ ಕೊನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‍ಸೈಟ್ https://kannadasiri.karnataka.gov.in/ ಗೆ ಅಪ್‍ಲೋಡ್ ಮಾಡಬೇಕೆಂದು ಸೂಚಿಸಲಾಗಿದೆ.

ತಂತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಲು ಬೋಧಕರು, ಬೋಧಕೇತರರು, ವಿದ್ಯಾರ್ಥಿಗಳನ್ನು ಮತ್ತು ಸಂಸ್ಥೆಗಳ ವಾಹನ ಚಾಲಕರನ್ನು ಪ್ರೇರೇಪಿಸಬೇಕು. ಕೇಂದ್ರ ಸರಕಾರದ ಜಾಲತಾಣದಲ್ಲಿ ‘ಹರ್ ಘರ್ ತಿರಂಗಾ' ಅಡಿಯಲ್ಲಿ ಈ ಸಂಬಂಧವಾಗಿ ಇರುವ ಬ್ಯಾನರ್ ಮತ್ತು ಪೋಸ್ಟರ್ ಗಳ ಮಾದರಿಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News