ಯುಎಇ ಗಗನಯಾತ್ರಿಯ ಬಾಹ್ಯಾಕಾಶ ತರಬೇತಿ ಪೂರ್ಣ

Update: 2022-07-03 16:58 GMT
Photo: Twitter/@MBRSpaceCentre

ಅಬುಧಾಬಿ, ಜು.3: ರಶ್ಯ ರಾಜಧಾನಿ ಮಾಸ್ಕೋದ ಎನ್‌ಇಕೆ ಅನಲಾಗ್ ತರಬೇತಿ ಕೇಂದ್ರದಲ್ಲಿ 8 ತಿಂಗಳ ಬಾಹ್ಯಾಕಾಶ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಯುಎಇಯ ಗಗನಯಾತ್ರಿ ಸಲೇಹ್ ಅಲ್‌ಅಮೀರಿ 8 ತಿಂಗಳ ಪ್ರತ್ಯೇಕವಾಸದ ಬಳಿಕ ಬಾಹ್ಯಪ್ರಪಂಚಕ್ಕೆ ಕಾಲಿರಿಸಿದ್ದಾರೆ ಎಂದು ವರದಿಯಾಗಿದೆ. 

ಅನಲಾಗ್ ತರಬೇತಿ ಎಂದರೆ, ಭೂಮಿಯ ಮೇಲೆ ಬಾಹ್ಯಾಕಾಶದ ರೀತಿಯ ಪ್ರಪಂಚವನ್ನು ರೂಪಿಸಿದ ಅತ್ಯಾಧುನಿಕ ಕೇಂದ್ರ. ಬಾಹ್ಯಾಕಾಶವನ್ನು ಹೋಲುವ ಈ ವ್ಯವಸ್ಥೆಯೊಳಗೆ ಪ್ರವೇಶಿಸುವ ಗಗನಯಾತ್ರಿಗಳಿಗೆ ಬಾಹ್ಯಾಕಾಶದ ಪರಿಸ್ಥಿತಿಯ ಮಾಹಿತಿಯ ಜತೆಗೆ ಬಾಹ್ಯಾಕಾಶ ಪ್ರಯಾಣದ ತರಬೇತಿಯನ್ನು ಒದಗಿಸಲಾಗುತ್ತದೆ. ಭೂಮಿಯ ಕಕ್ಷೆಯಿಂದ ನಿರ್ಗಮನ, ಸೂಚಿಸಲಾದ ಗ್ರಹಕ್ಕೆ ಹಾರಾಟ, ಮೊಡ್ಯೂಲ್(ಗಗನನೌಕೆ)ನ ಲ್ಯಾಂಡಿಂಗ್, ವೈಜ್ಞಾನಿಕ ಸಂಶೋಧನೆಯ ಕಾರ್ಯಕ್ಷಮತೆ ಮತ್ತು ಭೂಮಿಗೆ ಮರಳುವಿಕೆ - ಈ ಹಂತಗಳು ತರಬೇತಿಯಲ್ಲಿ ಸೇರಿವೆ. 

ಸಿರಿಯುಸ್-21 ಬಾಹ್ಯಾಕಾಶ ಯೋಜನೆಯಲ್ಲಿ ಯುಎಇ ಕೂಡಾ ಸದಸ್ಯನಾಗಿದ್ದು ಈ ಯೋಜನೆಯ ಸದಸ್ಯರು 2021ರ ನವೆಂಬರ್‌ನಿಂದ ಮಾಸ್ಕೊದ ಕೇಂದ್ರದಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ. ಈ ಅವಧಿಯಲ್ಲಿ ಸಲೇಹ್‌ನ ಪತ್ನಿ ಹೆಣ್ಣುಮಗುವಿಗೆ ಜನ್ಮನೀಡಿದ್ದು ತನ್ನ ಪುತ್ರಿಯನ್ನು ನೋಡಲು ಕಾತರನಾಗಿದ್ದೇನೆ ಎಂದು ಸಲೇಹ್ ಹೇಳಿದ್ದಾರೆ. ರಶ್ಯದ ಕಮಾಂಡರ್ ಒಲೆಗ್ ಬ್ಲಿನೋವ್, ಅಮೆರಿಕದ ಪ್ಲೈಟ್ ಇಂಜಿನಿಯರ್ ಆ್ಯಶ್ಲೆ ಕೊವಾಲ್ಸ್ಕಿ, ರಶ್ಯದ ಸಂಶೋಧಕಿ ಎಕತೆರಿನಾ ಕರ್ಯಾಕಿನಾ, ರಶ್ಯದ ಫ್ಲೈಟ್ ಸರ್ಜನ್ ವಿಕ್ಟೋರಿಯಾ ಕಿರಿಶೆಂಕೊ ಮತ್ತು ಅಮೆರಿಕದ ಸಂಶೋಧಕ ವಿಲಿಯಂ ಬ್ರೌನ್ ತಂಡದ ಸದಸ್ಯರಾಗಿದ್ದಾರೆ. ಅಬ್ದಲ್ಲಾ ಅಲ್‌ಹಮಾದಿ ಮೀಸಲು ಗಗನಯಾತ್ರಿಯಾಗಿ ಸಲೇಹ್ ಜತೆಗಿದ್ದರು. ಸಲೇಹ್ ಸಾಧನೆಯನ್ನು ಎಮಿರೇಟ್ಸ್‌ನ ಪ್ರಥಮ ಗಗನಯಾನಿ ಹಝಾ ಅಲ್‌ಮನ್ಸೂರಿ ಶ್ಲಾಘಿಸಿದ್ದಾರೆ. 

ಮಂಗಳ ಮತ್ತು ಇತರ ಗ್ರಹಗಳ ಅನ್ವೇಷಣೆಗಾಗಿ ಮಾನವರನ್ನು ಸಿದ್ಧಪಡಿಸುವಲ್ಲಿ ಅನಲಾಗ್ ಕಾರ್ಯಾಚರಣೆ ಪ್ರಮುಖ ಪಾತ್ರ ವಹಿಸುತ್ತವೆ. ಭೂಮಿಯ ಮೇಲೆ ಬಾಹ್ಯಾಕಾಶ ರೀತಿಯ ಪರಿಸ್ಥಿತಿಗಳನ್ನು ಅನುಕರಿಸುವ ಮೂಲಕ ಅನಲಾಗ್ ಕಾರ್ಯಾಚರಣೆಗಳು ಬಾಹ್ಯಾಕಾಶ ಯಾನ, ಸಂಶೋಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. 

ಪ್ರತ್ಯೇಕವಾಗಿ ವಾಸಿಸುವುದರಿಂದ ಮಾನವರ ಮೇಲಿನ ಮಾನಸಿಕ ಮತ್ತು ದೈಹಿಕ ಪರಿಣಾಮಗಳನ್ನು ಮತ್ತು ತಂಡದ ಕ್ರಿಯಾತ್ಮಕತೆಯನ್ನು  ದೀರ್ಘಕಾಲದ ಬಾಹ್ಯಾಕಾಶ ಸಂಶೋಧನಾ ಕಾರ್ಯಾಚರಣೆಗೆ ಸಿದ್ಧಪಡಿಸಲು ಈ ತರಬೇತಿ ನೆರವಾಗುತ್ತದೆ. ಯುಎಇಯ ಅನಲಾಗ್ ಕಾರ್ಯಾಚರಣೆ ಮಂಗಳ-2117 ಬಾಹ್ಯಾಕಾಶ ಯೋಜನೆಯತ್ತ ಪ್ರಮುಖ ಹೆಜ್ಜೆಯಾಗಿದೆ. 2117ರ ಅಂತ್ಯದೊಳಗೆ ಮಂಗಳನಲ್ಲಿ ಮಾನವನ ನೆಲೆ ಸ್ಥಾಪಿಸುವುದು ಈ ಯೋಜನೆಯ ಪ್ರಧಾನ ಉದ್ದೇಶವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News