ಪ್ರಧಾನಿ ಕಚೇರಿಯ ಅಧಿಕಾರಿ ಸೋಗಿನಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ: ಪ್ರಕರಣ ದಾಖಲು

Update: 2022-07-03 18:12 GMT
 ಚಾರುಲತಾ ಸೋಮಲ್‌- ಜಿಲ್ಲಾಧಿಕಾರಿ

ಚಾಮರಾಜನಗರ: ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಎಂದು ಹೇಳಿಕೊಂಡು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ಕರೆ ಮಾಡಿ, ಬಿಳಿಗಿರಿರಂಗನಬೆಟ್ಟದಲ್ಲಿ ದೇವರ ದರ್ಶನ, ಬಿಆರ್‌ಟಿಯಲ್ಲಿ ಸಂಪಿಗೆ ಮರ ವೀಕ್ಷಣೆ ಹಾಗೂ ವಾಸ್ತವ್ಯಕ್ಕೆ ಜಂಗಲ್‌ ಲಾಡ್ಜಸ್‌ನಲ್ಲಿ ಕೊಠಡಿಗಳ ವ್ಯವಸ್ಥೆ ಮಾಡಲು ಬೇಡಿಕೆ ಇಟ್ಟಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ನಾನು ಗುಜರಾತ್‌ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿದ್ದು, ಈಗ ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿಕೊಂಡ ರಾವ್‌ ಎಂಬ ಹೆಸರಿನ ವ್ಯಕ್ತಿ ಜಿಲ್ಲಾಧಿಕಾರಿ ಅವರಿಗೆ ಜೂನ್‌ 27ರಂದು ಕರೆ ಮಾಡಿದ್ದರು. ಕುಟುಂಬ ಸಮೇತರಾಗಿ ಜುಲೈ 2ರಂದು ಬಿಳಿಗಿರಿರಂಗನಬೆಟ್ಟಕ್ಕೆ ಬರುವುದಾಗಿ ತಿಳಿಸಿದ್ದರು. ಪೂರ್ಣ ಹೆಸರು ಹಾಗೂ ಹುದ್ದೆಯ ವಿವರಗಳನ್ನು ಜಿಲ್ಲಾಧಿಕಾರಿ ಕೇಳಿದಾಗ, ಗೋಪ್ಯದ ಕಾರಣಕ್ಕೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ವ್ಯಕ್ತಿಯ ಮಾತಿನ ಶೈಲಿ ಬಗ್ಗೆ ಅನುಮಾನಗೊಂಡ ಜಿಲ್ಲಾಧಿಕಾರಿ ಅವರು ಆತನ ಮೊಬೈಲ್‌ ವಿವರಗಳನ್ನು ಪರಿಶೀಲಿಸಿದಾಗ ಆತ ಹೇಳಿದ್ದು ಸುಳ್ಳು ಎಂದು ಗೊತ್ತಾಯಿತು.

ಪ್ರಧಾನಿ ಕಚೇರಿಯ ಹೆಸರು ದುರ್ಬಳಕೆ ಮಾಡಿಕೊಂಡು ಮೋಸ ಮಾಡುತ್ತಿರುವ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ದೂರು ನೀಡಿದ್ದರು.

ಶನಿವಾರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ವ್ಯಕ್ತಿಯು 2ರಂದು ಬಿಳಿಗಿರಿರಂಗನಬೆಟ್ಟಕ್ಕೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಎಫ್‌ಐಆರ್‌ ದಾಖಲಾಗಿರುವುದನ್ನು ಖಚಿತ ಪಡಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಅವರು, ‘ಬೇರೆ ರಾಜ್ಯದ ನಿವೃತ್ತ ಮುಖ್ಯಕಾರ್ಯದರ್ಶಿ ಎಂದು ಹೇಳಿಕೊಂಡು ವ್ಯಕ್ತಿ ಕರೆ ಮಾಡಿದ್ದ. ಆತ ನಕಲಿ ವ್ಯಕ್ತಿ. ಎಫ್‌ಐಆರ್‌ ದಾಖಲಿಸಿದ್ದೇವೆ. ಇನ್ನೂ ಬಂಧಿಸಿಲ್ಲ. ಆತನ ವಿವರಗಳನ್ನು ಕಲೆ ಹಾಕುತ್ತಿದ್ದು, ಮೈಸೂರು ಭಾಗದವನು ಎಂದು ಗೊತ್ತಾಗಿದೆ. ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News