×
Ad

ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕ: ಸಚಿವ ಬಿ.ಸಿ.ನಾಗೇಶ್

Update: 2022-07-04 22:08 IST

ಕಲಬುರಗಿ, ಜು.4: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆಯಿದ್ದು, ಇದನ್ನು ನಿವಾರಿಸಲು ಪ್ರಸ್ತುತ ನೇಮಕಾತಿ ಹಂತದಲ್ಲಿರುವ 15 ಸಾವಿರ ಶಿಕ್ಷಕರ ಪೈಕಿ ಕಲ್ಯಾಣ ಕರ್ನಾಟಕ ಭಾಗದಿಂದಲೇ 5 ಸಾವಿರ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಸೋಮವಾರ ಅಫ್ಝಲ್‍ಪುರ ತಾಲೂಕಿನ ದೇವಲ ಗಾಣಗಾಪುರದ ಸರಕಾರಿ ಪ್ರೌಢ ಶಾಲೆಯಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಪೂರ್ಣ ಪ್ರಮಾಣದ ಸಂಖ್ಯೆಯಲ್ಲಿ ಈ ಭಾಗದ ಶಿಕ್ಷಕರು ನೇಮಕಾತಿಯಾಗದಿದ್ದಲ್ಲಿ ಮತ್ತೊಮ್ಮೆ ತರಬೇತಿ ನೀಡಿ ಬರುವ ಡಿಸೆಂಬರ್ ಒಳಗೆ ಮತ್ತೆ ಸಿ.ಇ.ಟಿ ಪರೀಕ್ಷೆ ನಡೆಸಲಾಗುವುದು. 371ಜೆ ಮೀಸಲಾತಿಯಡಿ ಸ್ಥಳೀಯರು ನೇಮಕಾತಿ ಆಗುವುದರಿಂದ ಪ್ರದೇಶ ಬಿಟ್ಟು ಶಿಕ್ಷಕರು ಬೇರೆಡೆ ವರ್ಗಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಕಾರಣ ಕಳೆದ ಎರಡು ವರ್ಷ ಸರಿಯಾಗಿ ಶಾಲಾ ತರಗತಿ ನಡೆಯದ ಕಾರಣ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಹೀಗಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕಲಿಕಾ ಚೇತರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಲಿಕಾ ಚೇತರಿಕೆ ಕೋರ್ಸ್ ಬೋಧಿಸಿದ ನಂತರವೇ ಪಠ್ಯ ಬೋಧನೆ ಮಾಡಲಾಗುವುದು ಎಂದು ನಾಗೇಶ್ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಹಣೆಪಟ್ಟಿ ಕೊನೆಗೊಳಿಸುವುದು ನಮ್ಮ ಸರಕಾರದ ಪ್ರಥಮ ಆದ್ಯತೆ. ಹೀಗಾಗಿ ಈ ಭಾಗಕ್ಕೆ ಹೆಚ್ಚಿನ ಆರ್ಥಿಕ ಅನುದಾನ ನೀಡಲಾಗುತ್ತಿದೆ. ಕೇಂದ್ರ ಸರಕಾರವು ಈ ಭಾಗದ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ ಜಿಲ್ಲೆಯಲ್ಲಿ ಸೇರಿಸಿ ಅಭಿವೃದ್ಧಿಪಡಿಸುತ್ತಿದೆ. ಈ ಭಾಗದಲ್ಲಿನ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಹಲವರ ವಿರೋಧದ ನಡುವೆಯೂ ಮೊಟ್ಟೆ ವಿತರಿಸಿದ್ದು, ಈ ಕಾರ್ಯಕ್ರಮದ ಪ್ರಗತಿ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಶಾಲಾ ಶಿಕ್ಷಕರ ಕೊರತೆ ನೀಗಿಸಲು ರಾಜ್ಯದಾದ್ಯಂತ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಗೌರವ ಸಂಭಾವನೆಯನ್ನು 7,500 ರೂ. ಗಳಿಂದ 10 ಸಾವಿರ ರೂ.ಗಳಿಗೆ ಮತ್ತು ಪ್ರೌಢ ಶಾಲಾ ಶಿಕ್ಷಕರ ಗೌರವ ಸಂಭಾವನೆಯನ್ನು 8 ಸಾವಿರ ರೂ. ಗಳಿಂದ 10,500 ರೂ. ಗಳಿಗೆ ಹೆಚ್ಚಿಸಲಾಗಿದೆ ಎಂದು ನಾಗೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News