ಡೆನ್ಮಾಕ್: ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ 3 ಮಂದಿ ಮೃತ್ಯು; ಹಲವರಿಗೆ ಗಾಯ

Update: 2022-07-04 17:13 GMT

ಕೋಪೆನ್ಹೇಗನ್, ಜು.4: ಡೆನ್ಮಾರ್ಕ್ನ ರಾಜಧಾನಿ ಕೋಪೆನ್ಹೇಗನ್ನ ಶಾಪಿಂಗ್ ಮಾಲ್ನಲ್ಲಿ ರವಿವಾರ ನಡೆದ ಗುಂಡಿನ ದಾಳಿಯಲ್ಲಿ 3 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕೃತ್ಯ ಎಸಗಿದ ಶಂಕಿತ 22 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. 

ಇದು ಭಯೋತ್ಪಾದಕ ಕೃತ್ಯವೇ ಎಂಬುದು ಸ್ಪಷ್ಟವಾಗಿಲ್ಲ . ಆದರೆ ಸಾಮಾಜಿಕ ಮಾಧ್ಯಮದಲ್ಲಿ ಉಲ್ಲೇಖವಾಗಿರುವಂತೆ ಜನಾಂಗೀಯ ದ್ವೇಷದ ಕೃತ್ಯ ಎಂಬುದಕ್ಕೆ ಯಾವುದೇ ಆಧಾರವಿಲ್ಲ . ಆರೋಪಿ ಒಬ್ಬನೇ ಈ ಕೃತ್ಯ ಎಸಗಿದ್ದು ಆತನೋರ್ವ ಮನೋರೋಗಿಯಾಗಿರುವ ಸಾಧ್ಯತೆಯಿದೆ ಎಂದು ನಗರದ ಪೊಲೀಸ್ ಮುಖ್ಯಸ್ಥ ಸೊರೆನ್ ಥಾಮ್ಸನ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

 17 ವರ್ಷದ ಯುವಕ ಮತ್ತು ಯುವತಿ, 47 ವರ್ಷದ ರಶ್ಯನ್ ನಾಗರಿಕ ಮೃತಪಟ್ಟಿದ್ದು ಡೆನ್ಮಾರ್ಕ್ನ ಇಬ್ಬರು ಮಹಿಳೆಯರು, ಸ್ವಿಝರ್ಲ್ಯಾಂಡ್ನ ಇಬ್ಬರು ಪ್ರಜೆಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ರೈಫಲ್ನೊಂದಿಗೆ ಶಾಪಿಂಗ್ ಮಾಲ್ ಪ್ರವೇಶಿಸಿದ್ದ ಆರೋಪಿ, ತನ್ನ ಬಳಿಯಿರುವ ಗನ್ ನಕಲಿ ಎಂದು ಅಲ್ಲಿದ್ದವರಿಗೆ ಹೇಳಿದ್ದ. ಆದರೆ ಗನ್ನಿಂದ ಸಿಡಿದ ಬುಲೆಟ್ ಮೂರು ಮಂದಿಯನ್ನು ನೆಲಕ್ಕುರುಳಿಸಿದಾಗ ಅಲ್ಲಿದ್ದವರು ದಿಕ್ಕಾಪಾಲಾಗಿ ಓಡಿದರು ಎಂದು 

ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ರೈಫಲ್ ಹೊಂದಿದ್ದ ಆರೋಪಿ ಶಾಂತವಾಗಿ ಶರಣಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈತ ಡೆನ್ಮಾರ್ಕ್ ನಿವಾಸಿಯಾಗಿದ್ದು ಕೃತ್ಯ ಎಸಗಲು ಕಾರಣವೇನೆಂದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಶಾಪಿಂಗ್ ಮಾಲ್ನಲ್ಲಿ ಓರ್ವ ವ್ಯಕ್ತಿಯ ಕ್ರೂರ ದಾಳಿಯು ಡೆನ್ಮಾರ್ಕ್ ಅನ್ನು ಘಾಸಿಗೊಳಿಸಿದೆ ಎಂದು ಪ್ರಧಾನಿ ಮೆಟೆ ಫ್ರೆಡೆರಿಕ್ಸನ್ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News