×
Ad

ನ್ಯಾ. ಎಚ್.ಪಿ. ಸಂದೇಶ್ ಗೆ ಎಸಿಬಿಯಿಂದ ವರ್ಗಾವಣೆ ಬೆದರಿಕೆ ಆರೋಪ; KRS ಪಕ್ಷ ಖಂಡನೆ

Update: 2022-07-05 10:45 IST
ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)  ವರ್ಗಾವಣೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಅವರನ್ನು ವಜಾಗೊಳಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಒತ್ತಾಯಿಸಿದೆ. 

ಈ ಸಂಬಂಧ ಪ್ರಕಟನೆ ನೀಡಿರುವ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಮೇಲೆ ದಶಕದ ಹಿಂದೆ ಬಳ್ಳಾರಿ ಗಣಿ ಅಕ್ರಮಗಳಿಗೆ ಸಹಕರಿಸಿದ ಆರೋಪಗಳೂ ಸೇರಿದಂತೆ ಹಲವು ಗುರುತರ ಆರೋಪಗಳಿವೆ. ಈಗ ಅವರು ರಾಜ್ಯ ಎಸಿಬಿಯ ಮುಖ್ಯಸ್ಥ. ಇವರ ವಿರುದ್ಧವೇ ಇತ್ತೀಚೆಗೆ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್'ರವರು ಕಿಡಿ ಕಾರಿದ್ದರು ಮತ್ತು ಈ ಭ್ರಷ್ಟರೆಲ್ಲಾ ತನ್ನನ್ನೇ ವರ್ಗಾವಣೆ ಮಾಡಿಸುವಷ್ಟು ಸಶಕ್ತರು ಎಂದಿದ್ದರು. ರಾಜ್ಯ ನ್ಯಾಯಾಂಗದ ಇತಿಹಾಸದಲ್ಲಿ ಹೀಗೆಯೇ ನಿಷ್ಟುರವಾಗಿ ಮತ್ತು ನ್ಯಾಯಯುತವಾಗಿ ನ್ಯಾಯಾಂಗದ ಜವಾಬ್ದಾರಿ ನಿರ್ವಹಿಸುತ್ತಿದ್ದ ಶ್ರೀ. ಸತ್ಯನಾರಾಯಣ, ರಮೇಶ್'ರಂತಹ ನ್ಯಾಯಮೂರ್ತಿಗಳನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಿದ ಕೆಟ್ಟ ಉದಾಹರಣೆಗಳಿವೆ ಎಂದು ಹೇಳಿದ್ದಾರೆ.

'ಪ್ರಾಮಾಣಿಕ ಮತ್ತು ನ್ಯಾಯಪರ ನ್ಯಾಯಮೂರ್ತಿಗಳ ವರ್ಗಾವಣೆಗಳಿಂದ ನಷ್ಟಕ್ಕೊಳಗಾಗುವುದು ಅಂತಿಮವಾಗಿ ರಾಜ್ಯದ ಜನತೆಯೇ. ಈ ಬಾರಿ ಅದಾಗದಂತೆ ಈಗಿನ ಪರಮಭ್ರಷ್ಟ ಸರ್ಕಾರ ಮತ್ತು ಅಧಿಕಾರರೂಢ ನೀಚ ರಾಜಕಾರಣಿಗಳು ನೋಡಿಕೊಳ್ಳಬೇಕು' ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ... ಎಸಿಬಿ ಕಚೇರಿಗಳು ವಸೂಲಿ ಕೇಂದ್ರ ಎಂದಿದ್ದಕ್ಕೆ ನನಗೆ ವರ್ಗಾವಣೆಯ ಬೆದರಿಕೆ: ನ್ಯಾ.ಎಚ್.ಪಿ.ಸಂದೇಶ್

' ಕಳಂಕಿತ ವ್ಯಕ್ತಿಯೊಬ್ಬ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥನಾಗಿರುವುದು ಅಕ್ಷಮ್ಯ, ನಾಚಿಕೆಗೇಡು. ಹಾಗಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಭ್ರಷ್ಟ ಪೊಲೀಸ್ ಅಧಿಕಾರಿಯಾಗಿರುವ ಸೀಮಂತ್ ಕುಮಾರ್ ಸಿಂಗ್'ರನ್ನು ಈ ಕೂಡಲೇ ಎಸಿಬಿಯಿಂದ ತೊಲಗಿಸಿ ಪ್ರಾಮಾಣಿಕ ಅಧಿಕಾರಿಯೊಬ್ಬರನ್ನು ಆ ಸ್ಥಾನಕ್ಕೆ ನೇಮಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. 

'ಭ್ರಷ್ಟ ಮತ್ತು ನಾಲಾಯಕ್ ಸಂಸ್ಥೆ ಆಗಿರುವ ಎಸಿಬಿಯನ್ನು ರದ್ದು ಮಾಡಿ, ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಹೋರಾಟ ಮತ್ತು ಅಧಿಕಾರದ ಮೂಲಕ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮಾಡಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News