ಕೊಡಗಿನಲ್ಲಿ ಧಾರಾಕಾರ ಮಳೆ: ರಸ್ತೆಗುರುಳಿದ ಮರ, ವಿದ್ಯುತ್ ಕಂಬ, ಬಂಡೆ ಕಲ್ಲು

Update: 2022-07-05 10:36 GMT

ಮಡಿಕೇರಿ ಜು.5 : ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಹಾನಿಯಾಗಿದೆ. ಮರ, ವಿದ್ಯುತ್ ಕಂಬಗಳು, ಬಂಡೆಗಳು ಧರೆಗುರುಳುತ್ತಿದ್ದು, ಭಾಗಮಂಡಲ - ತಲಕಾವೇರಿ ರಸ್ತೆ ಗೆ ಬಂಡೆಯೊಂದು ಉರುಳಿ ಬಿದ್ದಿದೆ. ಬಳಿಕ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರ ಸಹಾಯದಿಂದ ಬಂಡೆಯನ್ನು ತೆರವುಗೊಳಿಸಿದ್ದಾರೆ. 

ಮೊಣ್ಣಂಗೇರಿ ಬಳಿ ಹೆದ್ದಾರಿಯಲ್ಲಿ  ವಿದ್ಯುತ್ ಕಂಬಗಳು ಧರೆಗುರುಳಿವೆ. ಭಾಗಮಂಡಲ ಹೋಬಳಿ ಚೇರಂಗಾಲ ಗ್ರಾಮದ ಲೋಕಪ್ರಕಾಶ್ ಅವರ ಮನೆಯ ಬಳಿ ಬರೆ ಕುಸಿದಿದ್ದು,  ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗೋಡೆ ಕುಸಿದು ಮಹಿಳೆಗೆ ಗಾಯ: ಧಾರಾಕಾರ ಮಳೆಯಿಂದ ಸ್ನಾನದ ಕೊಠಡಿ ಕುಸಿದು ವೃದ್ಧೆಯೊಬ್ಬರು  ಗಂಭೀರ ಗಾಯಗೊಂಡ  ಘಟನೆ ಶನಿವಾರಸಂತೆಯ  ಸುಳುಗಳಲೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ವಸಂತಮ್ಮ (69) ಗಾಯಗೊಂಡ ವೃದ್ಧೆಯಾಗಿದ್ದು,  ಎರಡು ಕಾಲು, ಮುಖ ಹಾಗೂ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News