×
Ad

ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2022-07-05 17:47 IST
ಮಹಾಂತೇಶ್‌ |  ಮಂಜುನಾಥ್‌ -( ಬಂಧಿತ ಆರೋಪಿಗಳು) ಹಾಗೂ ಚಂದ್ರಶೇಖರ್‌ ಗುರೂಜಿ

ಬೆಂಗಳೂರು/ಹುಬ್ಬಳ್ಳಿ, ಜು.5: ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ಇಲ್ಲಿನ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಹಾಗೂ ಮಹಾಂತೇಶ ಶಿರೂರು ಬಂಧಿತ ಆರೋಪಿಗಳಾಗಿದ್ದು, ಈ ಇಬ್ಬರು ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.

ಮಂಗಳವಾರ ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗುರೂಜಿ ಅವರನ್ನು ಕೊಲೆಗೈದ ಬಳಿಕ ಈ ಇಬ್ಬರು ಆರೋಪಿಗಳು ಹುಬ್ಬಳ್ಳಿಯಿಂದ ಕಾರಿನಲ್ಲಿ ಬಾಗಲಕೋಟೆ ಕಡೆಗೆ ಹೊರಟಾಗ ರಾಮದುರ್ಗ ಪಟ್ಟಣ ಸಮೀಪ ಬಂದಾಗ ಬಂಧಿಸಲಾಗಿದೆ.

ಪ್ರಮುಖವಾಗಿ ಆರೋಪಿಗಳ ಮೊಬೈಲ್ ಲೊಕೇಷನ್ ಜಾಡು ಹಿಡಿದು ಹುಬ್ಬಳ್ಳಿ ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದರು. ಆರೋಪಿಗಳು ರಾಮದುರ್ಗ ಮಾರ್ಗವಾಗಿ ಸಂಚರಿಸುತ್ತಿರುವುದನ್ನು ಖಚಿತ ಮಾಡಿಕೊಂಡು, ಇಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಿದರು.

ಆರೋಪಿಗಳು ಕಾರಿನಲ್ಲಿ ಬರುವುದನ್ನು ಖಾತ್ರಿ ಮಾಡಿಕೊಂಡ ರಾಮದುರ್ಗ ಪೊಲೀಸರು ರಾಜ್ಯ ಹೆದ್ದಾರಿ ಮೇಲೆ ಜೆಸಿಬಿ ಅಡ್ಡಹಾಕಿ ಕಾರು ನಿಲ್ಲಿಸಿದರು. ತದನಂತರ, ಇಬ್ಬರು ಪೊಲೀಸ್ ಅಧಿಕಾರಿಗಳು ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡು ಕಾರಿಗೆ ಮುಂಭಾಗ ಆಗಮಿಸಿದಾಗ ಹಿಂದಕ್ಕೆ ಕಾರು ತಿರುವಿ ಪರಾರಿಯಾಗದಂತೆ ಹಿಂಬದಿಯಿಂದಲೂ ವಾಹನ ನಿಲ್ಲಿಸಿ ತಡೆಯಲಾಯಿತು.

ಬಳಿಕ ಸುತ್ತುವರಿದ ಪೊಲೀಸರು ಆರೋಪಿಗಳನ್ನು ಹಿಡಿದು ಪೊಲೀಸ್ ವಾಹನ ಹತ್ತಿಸಿ, ಅಲ್ಲಿಂದ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದರು.

ಆರೋಪಿ ಪತ್ನಿ ಗುರೂಜಿಗೆ ಆಪ್ತೆ

ಬಂಧಿತ ಆರೋಪಿಗಳ ಪೈಕಿ ಮಹಾಂತೇಶ ಶಿರೂರು ಪತ್ನಿ ವನಜಾಕ್ಷಿ ಎಂಬಾಕೆ ಚಂದ್ರಶೇಖರ್ ಗುರೂಜಿಗೆ ಆಪ್ತೆಯಾಗಿದ್ದಳು ಎನ್ನಲಾಗಿದೆ. ಗುರೂಜಿ ಆಕೆಯ ಹೆಸರಿನಲ್ಲಿ ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‍ಮೆಂಟ್ ಸೇರಿದಂತೆ ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು. 

ಅಷ್ಟೇ ಅಲ್ಲದೆ, ಗುರೂಜಿ ಅವರ ಎಲ್ಲ ವ್ಯವಹಾರಗಳು ಈಕೆಗೆ ತಿಳಿದಿತ್ತು. ಇತ್ತೀಚಿಗೆ ಹಣಕಾಸಿನ ವಿಚಾರ ಪ್ರಸ್ತಾಪ ಮಾಡಿದಾಗ, ಬಂಧಿತ ಆರೋಪಿಗಳು, ವನಜಾಕ್ಷಿ ಹಾಗೂ ಗುರೂಜಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ. ಈಕೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News