×
Ad

ಡಿಕೆಶಿ ನಿಮ್ಮ ಪ್ರತಿಸ್ಪರ್ಧಿಯೇ: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

Update: 2022-07-05 18:42 IST

ಬೆಂಗಳೂರು, ಜು. 5: ‘ಕೆಪಿಸಿಸಿ ಅಧ್ಯಕ್ಷರನ್ನೇ ಆಪ್ತ ಎನ್ನಲು ಸಿದ್ದರಾಮಯ್ಯ ಹಿಂದೇಟು ಹಾಕಿದ್ದಾರೆಂದರೆ ಇವರ ನಡುವಿನ ಕಂದಕ ಎಷ್ಟು ಆಳವಿರಬಹುದು? ಸಿದ್ದರಾಮಯ್ಯನವರೇ, ಸಿದ್ದರಾಮೋತ್ಸವ ಸ್ವಾಗತ ಸಮಿತಿಯಲ್ಲಿ ಇರುವವರು ಮಾತ್ರ ಆಪ್ತರೇ? ಡಿಕೆಶಿ ನಿಮ್ಮ ಪ್ರತಿಸ್ಪರ್ಧಿಯೇ?' ಎಂದು ಬಿಜೆಪಿ ಪ್ರಶ್ನಿಸಿದೆ. 

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸಿದ್ದರಾಮಯ್ಯರನ್ನು ಮುಂದಿನ ಸಿಎಂ ಎಂದು ಘೋಷಿಸುವ ವೇದಿಕೆಯೇ ಸಿದ್ದರಾಮೋತ್ಸವ ಎಂದು ನಾವು ಆರಂಭದಲ್ಲೇ ಹೇಳಿದ್ದೆವು. ಈಗ ನಾಡಿನ ಜನತೆಯಲ್ಲಿ ಹೀಗೊಂದು ಸಂಶಯ ಹರಿದಾಡುತ್ತಿದೆ.

srlopcm75@gmail.com ಅಂದರೆ, sr = ಸಿದ್ದರಾಮಯ್ಯ, lop= ಪ್ರತಿಪಕ್ಷ ನಾಯಕ, cm = ಮುಖ್ಯಮಂತ್ರಿ, 75= ಅಮೃತ ಮಹೋತ್ಸವ' ಎಂದು ಟೀಕಿಸಿದೆ.

‘ಪಿಎಸ್ಸೈ ಹಗರಣದ ಆರೋಪಿಗಳ ವಿರುದ್ಧ ಕ್ಷಿಪ್ರನಡೆ ಭ್ರಷ್ಟಾಚಾರದ ವಿರುದ್ಧದ ಬಿಜೆಪಿಯ ಬದ್ಧತೆಗೆ ಸಾಕ್ಷಿ. ಇತಿಹಾಸದಲ್ಲೇ ಮೊದಲಿಗೆ ಅಪರಾಧ ಪ್ರಕರಣವೊಂದರಲ್ಲಿ ಎಡಿಜಿಪಿಯನ್ನು ಬಂಧಿಸಿದ್ದಲ್ಲದೆ, 3 ತಿಂಗಳಲ್ಲಿ ತೆಗೆದುಕೊಂಡಿರುವ ನಿರ್ದಾಕ್ಷಿಣ್ಯ ಕ್ರಮಗಳು ಸರಕಾರದ ಜನಪರ, ಸ್ವಚ್ಛ ಆಡಳಿತದ ದೃಢಹೆಜ್ಜೆಗಳಾಗಿವೆ' ಎಂದು ಬಿಜೆಪಿ ಹೇಳಿದೆ.

‘ಭ್ರಷ್ಟಾಚಾರ ಸಮಾಜವನ್ನು ಗೆದ್ದಲಿನಂತೆ ತಿನ್ನುತ್ತಿರುವುದು ಕಟುವಾಸ್ತವ. ಇದು ಉಲ್ಬಣಾವಸ್ಥೆ ತಲುಪಲು ಕಾರಣರಾರು ಎಂದು ಎದೆ ಮುಟ್ಟಿಕೊಂಡು ನೋಡಿಕೊಳ್ಳಬೇಕು. ಕೋತಿ ತಾನು ಮೊಸರು ತಿಂದು ಹೋತದ ಗಡ್ಡಕ್ಕೆ ಸವರಿದ್ದು ಗೊತ್ತಲ್ಲವೇ? ಇದಕ್ಕೆ ಕಾರಣರಾದವರು ಸತ್ಯಹರಿಶ್ಚಂದ್ರರಂತೆ ಮಾತಾಡುವುದನ್ನು ನಿಲ್ಲಿಸುವುದು ಒಳಿತು' ಎಂದು ಬಿಜೆಪಿ ಸಲಹೆ ಮಾಡಿದೆ.

‘ಭ್ರಷ್ಟಾಚಾರದಲ್ಲಿ ಯಾರ ‘ಕೈ'ವಾಡವಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ! ವೇಷಧಾರಿಗಳೆಲ್ಲ ಕಳ್ಳಾಟವಾಡುತ್ತ ನಮ್ಮನ್ನು ಪ್ರಶ್ನಿಸುತ್ತಿರುವವರೇ ಕರ್ಮಕಾಂಡಗಳ ಮೂಲಪುರುಷರು. ಪಾಪಪ್ರಜ್ಞೆಯಿಂದ ಬಡಬಡಿಸುವುದನ್ನು ಬಿಟ್ಟು, ಮಾಡಿದ ಪಾಪವನ್ನು ಒಪ್ಪಿಕೊಳ್ಳುವುದು ಮರ್ಯಾದಸ್ಥರ ಲಕ್ಷಣ' ಎಂದು ಬಿಜೆಪಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News