ಬಕ್ರೀದ್ ಪ್ರಯುಕ್ತ ಗೋವು, ಒಂಟೆಗಳ ವಧೆ ಮಾಡಲು ಅವಕಾಶವಿಲ್ಲ: ಅಬ್ದುಲ್ ಅಝೀಂ

Update: 2022-07-05 14:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.5: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವು, ಒಂಟೆಗಳ ಹತ್ಯೆ ಮತ್ತು ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ಸರಕಾರ, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020ರ ಪ್ರಕಾರ ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ ಕುರಿ ಹಾಗೂ ಮೇಕೆಗಳನ್ನು ಹೊರತುಪಡಿಸಿ ಇತರೆ ಪ್ರಾಣಿಗಳಾದ ಗೋವು, ಒಂಟೆ ಇತ್ಯಾದಿಗಳನ್ನು ಸಾಗಾಣಿಕೆ ಮಾಡಲು ಹಾಗೂ ಅನಧಿಕೃತವಾಗಿ ಪ್ರಾಣಿ ವಧೆ ಮಾಡಲು ಅವಕಾಶವಿಲ್ಲ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ ತಿಳಿಸಿದ್ದಾರೆ.

ಈ ಕಾಯ್ದೆಯನ್ವಯ ಪ್ರಾಣಿ ಸಾಗಾಣಿಕೆ ಹಾಗೂ ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ಸರಕಾರ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಆದೇಶ ನೀಡಿದೆ. ಈ ಇಲಾಖೆಗಳು ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಹಾಗೂ ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೊರವಲಯದ ಹೆದ್ದಾರಿಗಳಲ್ಲಿ ಐದು ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020ರ ಪ್ರಕಾರ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಂಡು 50 ಸಾವಿರ ರೂ.ದಂಡ ಹಾಗೂ 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ನೀಡಲು ಅವಕಾಶವಿದೆ. ಮುಂದುವರೆದು, ಯಾವುದೆ ವ್ಯಕ್ತಿ ಕಾನೂನುಬಾಹಿರವಾಗಿ ಗೋವು ಸಾಗಾಣಿಕೆ ಹಾಗೂ ವಧೆ ಮಾಡಿದಲ್ಲಿ ತಾನು ವಾಸಿಸುವ ಸ್ಥಳದಲ್ಲಿ ಮಾತ್ರವಲ್ಲದೆ ಇತರೆ ಪ್ರದೇಶಗಳಲ್ಲಿಯೂ ಕಾನೂನು ಸುವ್ಯವಸ್ಥೆಗೆ ಭಂಗವಾಗಿ ಹಿಂಸಾಚಾರ ಹಾಗೂ ಆಸ್ತಿಗಳ ನಷ್ಟಕ್ಕೆ ಎಡೆ ಮಾಡಿಕೊಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಆದುದರಿಂದ, ರಾಜ್ಯದಲ್ಲಿ ಅನಧಿಕೃತವಾಗಿ ಗೋವು, ಒಂಟೆ ಹಾಗೂ ಇತರೆ ಪ್ರಾಣಿಗಳನ್ನು ಸಾಗಿಸುವುದು ಹಾಗೂ ಅನಧಿಕೃತವಾಗಿ ಪ್ರಾಣಿವಧೆ ಮಾಡದಂತೆ ಮುಸ್ಲಿಮ್ ಬಂಧುಗಳಿಗೆ ಮನವಿ ಮಾಡಿರುವ ಅವರು, ಸರಕಾರ ನೀಡಿರುವ ಆದೇಶಗಳಂತೆ ನಡೆದುಕೊಂಡು, ರಾಜ್ಯದಲ್ಲಿ ಯಾವುದೆ ಅಹಿತಕರ ಘಟನೆಯಾಗದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News