×
Ad

ಮೈಸೂರು: ಎರಡನೇ ದಿನವೂ ಮುಂದುವರಿದ ಫರೂಖಿಯಾ ಖಾಸಗಿ ಶಾಲೆಯ ವಿದ್ಯಾರ್ಥಿನಿಯರ ಪ್ರತಿಭಟನೆ

Update: 2022-07-05 21:21 IST

ಮೈಸೂರು,ಜು.5: ಯಾವುದೇ ಮುನ್ಸೂಚನೆಯಿಲ್ಲದೆ ನಗರದ ಫರೂಖಿಯಾ ಖಾಸಗಿ ಬಾಲಕಿಯರ ಪ್ರೌಢ ಶಾಲೆಗೆ  ಬೀಗ ಜಡಿದಿರುವ ಕ್ರಮವನ್ನು ಖಂಡಿಸಿ ವಿದ್ಯಾರ್ಥಿನಿಯರು ಮಳೆಯ ನಡುವೆಯೂ ಎರಡನೇ ದಿನ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು.

ನಗರದ ಪೈಲಟ್ ವೃತ್ತದ ಲಷ್ಕರ್ ಮೊಹಲ್ಲಾದಲ್ಲಿರುವ ಫಾರೂಕಿಯ ಖಾಸಗಿ ಬಾಲಕಿಯರ ಪ್ರೌಢಶಾಲೆಯ ಮಕ್ಕಳು ಮಂಗಳವಾರವೂ ಪ್ರತಿಭಟನೆ ನಡೆಸಿ ಶಾಲೆಗೆ ಅವಕಾಶ ಕಲ್ಪಿಸುವಂತೆ ಭಿತ್ತಿಪತ್ರ ಹಿಡಿದು ಸರ್ಕಾರಕ್ಕೆ ಒತ್ತಾಯಿಸಿದರು.

ಅಮ್ ಆದ್ಮಿ ಪಕ್ಷದ ಮುಖಂಡೆ ಧರ್ಮಶ್ರೀ ಮಾತನಾಡಿ, ನ್ಯಾಯಾಲಯದ ಆದೇಶ 2008ರಲ್ಲೇ ಆಗಿದೆ. ಅಲ್ಲಿಂದ ಇಲ್ಲಿವರೆಗೂ ಸರ್ಕಾರ ಏನು ಮಾಡುತ್ತಿತ್ತು? ಇಷ್ಟುದಿನ ಮಲಗಿದ್ದು ಈಗ ಸರ್ಕಾರ ಎದ್ದು ಬಂದಿದಿಯೇ? ಸರ್ಕಾರ ಮತ್ತು ಶಾಲಾ ಆಡಳಿತ ಮಂಡಳಿ ವಿವಾದ ಏನೆ ಇರಲಿ ಮೊದಲು ಮಕ್ಕಳ ಶಿಕ್ಷಣಕ್ಕೆ ತೊಂದರೆ ನೀಡಬಾರದಿತ್ತು. ಆದರೆ ಜಿಲ್ಲಾಡಳಿತ ಮಕ್ಕಳ ಶಿಕ್ಷಣವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿರುವುದು ಅತ್ಯಂತ ಖಂಡನೀಯ ಎಂದರು.

ಸರ್ಕಾರ ಮೊದಲು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು, ಈಗ ಮಕ್ಕಳು ಬೀದಿಯಲ್ಲಿ ಕುಳಿತು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಅವರಿಗೆ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ರಫತುಲ್ಲಾ ಖಾನ್, ಆಮ್ ಆದ್ಮಿ ಪಕ್ಷದ ಪ್ರಸಾದ್ ಶಾಲಾ ಆಡಳಿತ ಮಂಡಳಿ ನಿರ್ದೇಶಕ ನಬೀವುಲ್ಲಾ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಕೋರ್ಟ್ ಆದೇಶದಂತೆ ಶಾಸಕಾಂಗ ಸಮಿತಿ ಸೂಚನೆ ಮೇರೆಗೆ ಶಾಲೆ ವಶಕ್ಕೆ: ಸಚಿವ ಎಸ್.ಟಿ.ಸೋಮಶೇಖರ್

ಕೋರ್ಟ್ ಆದೇಶ ಪ್ರಕಾರ ಶಾಸಕಾಂಗ ಸಮಿತಿ ಸೂಚನೆ ಮೇರೆಗೆ ಫಾರೂಕಿಯ ಖಾಸಗಿ ಬಾಲಕಿಯರ ಪ್ರೌಢಶಾಲೆಯನ್ನು ವಶಕ್ಕೆ ಪಡೆಯಲಾಗಿದ್ದು, ಅಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರುಗಳಿಗೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡಲಾಗುವುದು. 

ಈಗಾಗಲೇ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳುವಂತೆ ಶಾಸಕಾಂಗ ಸಮಿತಿ ಅಧ್ಯಕ್ಷ ಭೂಪಯ್ಯ ಅವರ ನೇತೃತ್ವದಲ್ಲಿ ಸೂಚಿಸಲಾಗಿತ್ತು. ಅದರಂತೆ ಶಾಲೆಯನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 

ಎಸ್.ಟಿ.ಸೋಮಶೇಖರ್- ಸಹಕಾರ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News