ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ದೇವನೂರರ 'ಆರ್‌ಎಸ್‌ಎಸ್‌ ಆಳ ಮತ್ತು ಅಗಲ'

Update: 2022-07-06 08:24 GMT

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅನ್ನು ವಿಶ್ಲೇಷಿಸುವ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಹೊಸ ಕನ್ನಡ ಪುಸ್ತಕವು ಔಪಚಾರಿಕವಾಗಿ ಬಿಡುಗಡೆಗೊಳ್ಳುವ ಮುಂಚೆಯೇ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. 

'ಆರ್‌ಎಸ್‌ಎಸ್‌ನ ಆಳ ಮತ್ತು ಅಗಲ' ಪುಸ್ತಕವು ಶನಿವಾರದಂದು ( 2-7-2020) ಪುಸ್ತಕದಂಗಡಿಗಳನ್ನು ತಲುಪಿದ್ದರೆ, ಒಂದು ಅಂಗಡಿಯಲ್ಲಿ ರವಿವಾರವೇ ಸಂಪೂರ್ಣ 500 ಪ್ರತಿಗಳು ಮಾರಾಟಗೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಓದುಗರಿಂದ ಪುಸ್ತಕ ಕೊಂಡುಕೊಳ್ಳಲು ಬೇಡಿಕೆ ವ್ಯಕ್ತವಾಗುತ್ತಿದೆ. 

ಕರ್ನಾಟಕದ ಅಗ್ರಗಣ್ಯ ಬರಹಗಾರರಲ್ಲಿ ಓರ್ವರಾಗಿರುವ ದೇವನೂರರ ಈ ಕೃತಿಯಲ್ಲಿ , ಆರೆಸ್ಸೆಸ್ ಚಿಂತಕರಾದ ಗೋಲ್ವಾಲ್ಕರ್, ಸಾವರ್ಕರ್ ಮತ್ತು ಹೆಡಗೇವಾರ್ ಅವರ ಬರಹಗಳನ್ನು ಉಲ್ಲೇಖಿಸುತ್ತದೆ. 

'ಆರ್‌ಎಸ್‌ಎಸ್‌  ಆಳ ಮತ್ತು ಅಗಲ' ಆರು ಪ್ರಕಾಶಕರನ್ನು ಹೊಂದಿದ್ದು, ಇದರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹೆಸರಿನ ಗೌರಿ ಮೀಡಿಯಾ ಟ್ರಸ್ಟ್ ಕೂಡ ಒಂದಾಗಿದೆ. 

'ದೇವನೂರರ ಆರ್ ಎಸ್ ಎಸ್ ಆಳ ಮತ್ತು ಅಗಲ ಪುಸ್ತಕಕ್ಕೆ ಒಳ್ಳೆಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದೆವಾದರು ಎರಡು ದಿನಗಳಲ್ಲಿ 2000 ಪ್ರತಿಗಳಿಗು (9 ಸಾವಿರ ಪ್ರತಿಗಳು ಮೊದಲ ಮುದ್ರಣದಲ್ಲಿ ಗೌರಿ ಮೀಡಿಯಾ ಟ್ರಸ್ಟ್ ಪಾಲು) ಹೆಚ್ಚು ಬೇಡಿಕೆ ಬರತ್ತೆ ಅಂತಾ  ಅಂದುಕೊಂಡಿರಲಿಲ್ಲ. ನಾನುಗೌರಿ ವೆಬ್ ಸ್ಟೋರಿನಲ್ಲಂತೂ ಎರಡು ಮೂರು ನಿಮಿಷಕ್ಕೆ ಒಂದೊಂದು ಆರ್ಡರ್ ಬರ್ತಾ ಇದೆ. ಪೋಸ್ಟ್ ಆಫೀಸ್ ನವರು ಇಷ್ಟೆಲ್ಲಾ ಒಂದೇ ದಿನ ಆಗಲ್ಲ ಅಂತಾ ವಾಪಸ್ ಕಳಿಸಿದ್ದು ಆಯ್ತು.  ಒಂದು ಪೋಸ್ಟ್ ಆಫಿಸ್ ನಲ್ಲಿ 100 ಕಾಪಿ ಪೋಸ್ಟ್ ಮಾಡಕ್ಕೆ ಒಪ್ಪಿಕೊಂಡಿದ್ದೆ ದೊಡ್ಡದು. ಈಗ ಮುಂದಿನ 5000‌ ಪ್ರತಿಗಳ ರಿಪ್ರಿಂಟ್ ಕೂಡ ನಡಿತಾ ಇದೇ.  ಇದು ಹೇಳಿದ್ದಕ್ಕೆ ಪ್ರಾಥಮಿಕ ಕಾರಣ ಬುಕ್ ನಿಮಗೆ ತಲುಪಲು ತಡವಾದರೆ ಈ ಅಭೂತಪೂರ್ವ ರೆಸ್ಪಾನ್ಸ್ ಕಾರಣ. ಇನ್ನುಳಿದಂತೆ ಇದನ್ನು ಹೆಚ್ಚೆಚ್ಚು ಜನಕ್ಕೆ ತಲುಪಿಸಲು ಎಷ್ಟೋ ಜನ ಮುಂದೆ ಬರ್ತಾ ಇದಾರೆ. ಎಲ್ಲರಿಗೂ ಸಮರ್ಪಕ ಸಂಖ್ಯೆಯಲ್ಲಿ ಪುಸ್ತಕಗಳನ್ನು ಶೀಘ್ರದಲ್ಲಿಯೇ ತಲುಪಿಸಲಾಗುವುದು' ಎಂದು ಗೌರಿ ಮೀಡಿಯಾ  ಸಂಪಾದಕ ಗುರುವೆ ಹೆಜ್ಜಾಜಿ ಹೇಳಿದ್ದಾರೆ. 

ಇದು ಅನಿರೀಕ್ಷಿತ: ದೇವನೂರ 

ನಾವು ವಿಕೇಂದ್ರೀಕೃತ ಪ್ರಕಾಶನ ಚಳುವಳಿಯನ್ನು ಯೋಜಿಸುತ್ತಿದ್ದೆವು. ಮೊದಲ ಆವೃತ್ತಿಗಾಗಿ ಆರು ಪ್ರಕಾಶಕರು ಈ ಪುಸ್ತಕದ 9,000 ಪ್ರತಿಗಳನ್ನು ಹೊರತಂದರು. ಗೌರಿ ಮೀಡಿಯಾ ಟ್ರಸ್ಟ್ 2,000 ಪ್ರತಿಗಳನ್ನು ಪ್ರಕಟಿಸಿತು ಮತ್ತು ಕೇವಲ ಮೂರು ದಿನಗಳಲ್ಲಿ ಸಂಪೂರ್ಣ ಮಾರಾಟವಾಗಿದೆ. ಇದು ಅನಿರೀಕ್ಷಿತವಾಗಿತ್ತು. ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಅವರು ಈಗ 5,000 ಪ್ರತಿಗಳನ್ನು ಪ್ರಕಟಿಸುತ್ತಿದ್ದಾರೆ. ಆ ಆವೃತ್ತಿ ಇಂದು (ಬುಧವಾರ) ಬಿಡುಗಡೆಯಾಗಲಿದೆ ಎಂದು ದೇವನೂರ ಮಹಾದೇವ ಪ್ರತಿಕ್ರಿಯಿಸಿದ್ದಾರೆ. 

ಶೂದ್ರ-ದಲಿತ ಮತ್ತು ದ್ರಾವೀಡ ಪರಂಪರೆ ದೇವನೂರು ಜತೆಗಿದೆ; ಪ್ರಕಾಶ್ ರಾಥೋಡ್

ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಭಾರತದ ಮೂಲ ಸಂಸ್ಕೃತಿ ಮತ್ತು ಪರಂಪರೆಗೆ ಅವಮಾನ ಮಾಡಲು ತಿಪ್ಪರಲಾಗ ಹಾಕಿದಿರಿ. ಭಾರತೀಯ ಶ್ರಮ ಸಂಸ್ಕೃತಿಯ ಐಕಾನ್ ಲೇಖಕ ದೇವನೂರು ಮಹದೇವ ಅವರನ್ನು ಅವಮಾನಿಸಿದಿರಿ. ಆದರೆ, ಈ ನೆಲದ ಶೂದ್ರ-ದಲಿತ ಮತ್ತು ದ್ರಾವೀಡ ಪರಂಪರೆ ದೇವನೂರು ಜತೆಗಿದೆ ಎಂದು ವಿಧಾನಪರಿಷತ್ ನ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಟ್ವೀಟ್ ಮಾಡಿದ್ದಾರೆ. 

ಇತ್ತೀಚೆಗೆ ರೋಹಿತ್ ಚಕ್ರತೀರ್ಥ ನೃತೃತ್ವದ ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿ ದಿಟ್ಟ ನಿರ್ಧಾರ ಕೈಗೊಂಡಿದ್ದ  ದೇವನೂರು ಮಹಾದೇವ ತಮ್ಮ ಪಠ್ಯವನ್ನು ಕೈಬಿಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News