ಬಿಜೆಪಿ ಸರಕಾರ ಭ್ರಷ್ಟರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದೆ: ಶಾಸಕ ಸಿ.ಟಿ.ರವಿ

Update: 2022-07-06 13:14 GMT

ಚಿಕ್ಕಮಗಳೂರು, ಜು.6: ಹಿಂದಿನ ಸರಕಾರಗಳು ಹಗರಣಗಳನ್ನು ಮುಚ್ಚಿಹಾಕುವ ಕೆಲಸ ಮಾಡುತ್ತಿತ್ತು, ಆದರೆ ಬಿಜೆಪಿ ಸರಕಾರ ಭ್ರಷ್ಟಾಚಾರಿಗಳನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಬಿಜೆಪಿ ಸರಕಾರ ಮೊದಲ ಬಾರಿಗೆ ಹಗರಣಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರಿಂದ ಐಎಎಸ್, ಐಪಿಎಸ್ ಅಧಿಕಾರಿಗಳು ಜೈಲು ಸೇರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅನೇಕ ಹಗರಣಗಳ ಆರೋಪ ಕೇಳಿ ಬಂದಿತ್ತು. ಕೆಂಪಣ್ಣ ಆಯೋಗದಲ್ಲಿ ಅರ್ಕಾವತಿ ಹಗರಣದಲ್ಲಿ ಸಾವಿರಾರು ಕೋಟಿ ಹಣ ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ವರದಿ ನೀಡಲಾಗಿದೆ. ಇದರ ಹೊಣೆಯನ್ನು ಅಂದಿನ ಮುಖ್ಯಮಂತ್ರಿ ಹೊರಬೇಕಿತ್ತು, ಅವರು ಅವರು ಹಗರಣವನ್ನು ಮುಚ್ಚಿ ಹಾಕುವ ಕೆಲಸ ಮಾಡಿದರು ಎಂದು ಆರೋಪಿಸಿದರು.

ಅಕ್ರಮಗಳ ವಿರುದ್ಧ ಬಿಜೆಪಿ ಸರಕಾರ ಕಠಿಣ ಕ್ರಮ ಕೈಗೊಂಡಿದೆ. ಹಗರಣದಲ್ಲಿ ಭಾಗಿಯಾದರೇ ಜೈಲಿಗೆ ಹೋಗುವುದು ಗ್ಯಾರೆಂಟಿ ಎಂದು ತೋರಿಸಿಕೊಟ್ಟಿದೆ. ಈ ಕಠಿಣ ನಿಲುವನ್ನು ಹಿಂದಿನ ಸರಕಾರ  ತಗೆದುಕೊಂಡಿದ್ದರೇ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಬಹುದಿತ್ತು ಎಂದು ಹಿಂದಿನ ಸಿದ್ದರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಿಎಸ್ಸೈ ಹಗರಣದಲ್ಲಿ ಎಡಿಜಿಪಿ ಅವರ ಬಂಧನವಾಗಿದೆ. ಈ ಕಾರ್ಯವನ್ನು ಸಿದ್ದರಾಮಯ್ಯ ಅವರು ಶ್ಲಾಘಿಸಬೇಕಿತ್ತು. ಜಮೀರ್ ಅಹ್ಮದ್ ಮನೆಮೇಲೆ ಎಸಿಬಿ ದಾಳಿ ನಡೆಸಿ ಪಿಎಸ್ಸೈ ಹಗರಣ ಮುಚ್ಚಿಹಾಕಲು ಸರಕಾರ ಮುಂದಾಗಿದೆ ಎನ್ನುವ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದರು.

ಸಿದ್ದರಾಮಯ್ಯ ಅವರು ವಾಚ್ ಹಗರಣವನ್ನು ಮುಚ್ಚಿ ಹಾಕಿದರು. ಅರ್ಕಾವತಿ ಹಗರಣ ಮುಚ್ಚಿ ಹಾಕಿದರು. ಮರಳು ಮಾಫಿಯ ಮುಚ್ಚಿ ಹಾಕಿದರು. ಆದರೆ ನಮ್ಮ ಸರಕಾರ ಹಗರಣಗಳನ್ನು ಮುಚ್ಚಿ ಹಾಕುತ್ತಿಲ್ಲ. ಇಡಿ ಸೂಚನೆ ಮೇರೆಗೆ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಕಾನೂನು ರಚಿಸಿರುವುದು ಶಾಸನ ಸಭೆ, ಕಾನೂನು ಮಾಡುವಾಗ ಕಾಂಗ್ರೆಸ್‍ನವರಿಗೆ ಅನ್ವಯ ಆಗುವುದಿಲ್ಲ ಎಂದು ಕಾನೂನು ಮಾಡಿದ್ದಾರೆಯೇ, ಬೇರೆಯವರ ಮನೆಮೇಲೆ  ರೈಡ್ ಆದರೆ ಕಾನೂನು ಕ್ರಮಕೈಗೊಳ್ಳುತ್ತೆ, ಪ್ರಾಮಾಣಿಕರು ಇದ್ದರೇ ಏಕೆ ಭಯಪಡಬೇಕು ಎಂದು ಇದೇ ಮಾಜಿ ಮುಖ್ಯಮಂತ್ರಿಗಳು ಸಾಕಷ್ಟು ಬಾರಿ ಹೇಳಿಕೆ ನೀಡಿದ್ದಾರೆ. ಅವರ ಆಪ್ತರ ಮನೆಮೇಲೆ ರೈಡ್ ಆದರೇ ಏಕೆ ಸಂಕಟ ಪಡುತ್ತಾರೆ ಎಂದು ಪ್ರಶ್ನಿಸಿದರು.

ತಪ್ಪು ಮಾಡಿಲ್ಲ ಎಂದರೇ ಏಕೆ ಹೆದರಬೇಕು. ಎಸಿಬಿ ರಚನೆ ಮಾಡಿದ್ದು, ಸಿದ್ದರಾಮಯ್ಯ ಕಾಲದಲ್ಲಿ ಅವರು ಹಗರಣ ಮುಚ್ಚಿಹಾಕಲು ಮಾಡಿದರು. ನಾವು ಹಗರಣ ಬಿಚ್ಚಿಡುವ ಕೆಲಸ ಮಾಡುತ್ತಿದ್ದೇವೆ. ಲೋಕಾಯುಕ್ತವನ್ನು ಹಲ್ಲುಕಿತ್ತ ಹಾವಿನಂತೆ ಮಾಡಿದರು. ಎಸಿಬಿ ರಚಿಸಿ ಎಷ್ಟು ಹಗರಣ ಮುಚ್ಚಿ ಹಾಕಿದ್ದಾರೋ, ಫೈಲ್ ತಗೆದರೇ ಅರ್ಧ ಜನ ಜೈಲಿಗೆ ಹೋಗುತ್ತಾರೆಂದು ಲೇವಡಿ ಮಾಡಿದರು.

ಮಹಾರಾಷ್ಟ್ರದಲ್ಲಿ 40 ಜನ ಶಾಸಕರು ಪಕ್ಷ ತೊರೆದಿದ್ದಾರೆ. ರಾಜಕೀಯ ನಿಂತ ನೀರಲ್ಲ ರಾಜಕೀಯ ಧ್ರುವೀಕರಣ ಆಗುತ್ತಿರುತ್ತದೆ. ದೇವೇಂದ್ರ ಫಡ್ನಾವಿಸ್, ಮೋದಿ ನೇತೃತ್ವದಲ್ಲಿ ಶಿವಸೇನೆ ಮತ ಕೇಳಿದ್ದು, ಜನರು ಈ ಇಬ್ಬರ ನಾಯಕತ್ವಕ್ಕೆ ಓಟ್ ನೀಡಿದ್ದಾರೆ. ಹೊಂದಾಣಿಕೆ ಇದ್ದದ್ದು ಬಿಜೆಪಿ, ಶಿವಸೇನೆ ನಡುವೆ. ಜನವಿರೋಧಿ ಆಡಳಿತ, ಭ್ರಷ್ಟಾಚಾರ ಆಡಳಿತ ತೊಲಗಬೇಕು. ರಾಷ್ಟ್ರವಿರೋಧಿ ನಿಲುವು ಈ ಹಿನ್ನೆಲೆಯಲ್ಲಿ ಬದಲಾಯಿಸಿದ್ದೇವೆ ಎಂದರು.

ಪಠ್ಯಪುಸ್ತಕ ವಿಚಾರದಲ್ಲಿ ಸ್ಪಷ್ಟ ನಿಲುವು ಸರಕಾರ ತಗೆದುಕೊಂಡಿದೆ, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಅವರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಬರಗೂರು ರಾಮಚಂದ್ರಪ್ಪ ಮತ್ತು ರೋಹಿತ್ ಚಕ್ರತೀರ್ಥ ಪಠ್ಯಕ್ರಮವನ್ನು ಸಾರ್ವಜನಿಕರ ತೀರ್ಮಾನಕ್ಕೆ ಸರಕಾರ ಬಿಟ್ಟಿದೆ. ತಪ್ಪುಗಳಿದ್ದರೇ ಸರಿಪಡಿಸುವುದಾಗಿ ಸಿಎಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News