×
Ad

ಚಿಕ್ಕಮಗಳೂರು: ಮುಂದುವರಿದ ಧಾರಾಕಾರ ಮಳೆ; ಮೂರು ದಿನ ಕಳೆದರೂ ಪತ್ತೆಯಾಗದ ಬಾಲಕಿ!

Update: 2022-07-06 18:51 IST
(ಬಾಲಕಿಯ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿರುವ ಎಸ್‍ಟಿಆರ್ ಫ್ ತಂಡ)

ಚಿಕ್ಕಮಗಳೂರು, ಜು.6: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆ ಕೊಂಚಮಟ್ಟಿಗೆ ತಗ್ಗಿದೆಯಾದರೂ ಅಲ್ಲಲ್ಲಿ ಧಾರಾಕಾರ ಮಳೆ ಆರ್ಭಟ ಮುಂದುವರಿದಿದೆ. 

ಮಂಗಳವಾರ ಹಗಲು ಮತ್ತು ರಾತ್ರಿ ವೇಳೆ ಧಾರಾಕಾರ ಮಳೆಯಾಗಿದ್ದರೆ ಬುಧವಾರ ಬೆಳಗಿನ ಜಾವ ಭಾರೀ ಮಳೆಯಾಗಿದೆ. ಮಧ್ಯಾಹ್ನದ ವೇಳೆಗೆ ಮಳೆ ಕೊಂಚ ನೀಡಿದ್ದರೂ ಕಳಸ, ಕೊಟ್ಟಿಗೆಹಾರ, ಶೃಂಗೇರಿ, ಬಾಳೆಹೊನ್ನರೂ, ಕೆರೆಕಟ್ಟೆ, ಕುದುರೆಮುಖ ಭಾಗದಲ್ಲಿ ಮಧ್ಯಾಹ್ನದ ವೇಳೆ ಭಾರೀ ಮಳೆ ಸುರಿದಿದೆ. ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಗೊಂಡಿದೆ.

ಮೂರನೇ ದಿನವು ಬಾಲಕಿ ಶೋಧಕಾರ್ಯ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಹೊಸಪೇಟೆ ಗ್ರಾಮದ ಬಾಲಕಿ ಸುಪ್ರೀತಾ ಸೋಮವಾರ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಬಾಲಕಿಯ ಶೋಧಕಾರ್ಯ ಬುಧವಾರವು ಮುಂದವರೆದಿದೆ. ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೂ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿಪತ್ತು ನಿರ್ವಹಣಾ ತಂಡದಿಂದ ತೀವ್ರ ಶೋಧಕಾರ್ಯ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ಜಿಲ್ಲೆಗೆ ಕೆರೆಸಿಕೊಂಡಿದ್ದು, ಈ ತಂಡ ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರೂ ಬಾಲಕಿಯ ಸುಳಿವು ದೊರೆತ್ತಿಲ್ಲ. ಹಳ್ಳದಲ್ಲಿ ಕೊಚ್ಚಿಹೋಗ ಬಾಲಕಿ ಶೋಧಕಾರ್ಯವನ್ನು ಜಿಲ್ಲಾಡಳಿತ ತೀವ್ರಗೊಳಿಸಿದ್ದು ಶೀಘ್ರ ವೇ ಬಾಲಕಿ ಸುಳಿವು ಸಿಗುವ ಭರವಸೆಯನ್ನು ಇಟ್ಟಿದೆ. 

--------------------------------
ಬಾಲಕಿ ಶೋಧ ಕಾರ್ಯವನ್ನು ಬುಧವಾರದಿಂದ ತೀವ್ರಗೊಳಿಸಿದ್ದು, ಮಂಗಳವಾರ ಸಂಜೆ 25 ಜನರ ಎಸ್‍ಟಿಆರ್‍ಎಫ್ ತಂಡ ಜಿಲ್ಲೆಗೆ ಆಗಮಿಸಿ ಬುಧವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವಿಪತ್ತು ನಿರ್ವಹಣಾ ತಂಡವೂ ಶೋಧ ಕಾರ್ಯ ನಡೆಸುತ್ತಿದೆ. ಇಂದು ಅಥವಾ ನಾಳೆ ಬಾಲಕಿ ಸುಳಿವು ಸಿಗುವ ಸಾಧ್ಯತೆ ಇದೆ. 5ರಿಂದ 6 ಬಾರಿ ಶೋಧ ಕಾರ್ಯ ನಡೆಸಿದರೂ ಬಾಲಕಿ ಸುಳಿವು ಪತ್ತೆಯಾಗಿಲ್ಲ. 50 ಜನಕ್ಕೂ ಹೆಚ್ಚು ತರಬೇತಿ ಪಡೆದ ತಂಡ ಶೋಧಕಾರ್ಯದಲ್ಲಿ ಮಗ್ನರಾಗಿದ್ದಾರೆ.

- ಕೆ.ಎನ್.ರಮೇಶ್, ಜಿಲ್ಲಾಧಿಕಾರಿ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News