PSI ನೇಮಕಾತಿ ಅಕ್ರಮ ಪ್ರಕರಣ: ಕೋರ್ಟ್ ಗೆ 2 ಸಾವಿರ ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ ಸಿಐಡಿ

Update: 2022-07-06 14:45 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಜು.6: ಪಿಎಸ್ಸೈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ 2 ಸಾವಿರ ಪುಟಗಳುಳ್ಳ ಚಾರ್ಜ್‍ಶೀಟ್ ಅನ್ನು ಸಿಐಡಿ ಅಧಿಕಾರಿಗಳು ಕಲಬುರಗಿ 3ನೆ ಜೆಎಂಎಫ್‍ಸಿ ಕೋರ್ಟ್‍ಗೆ ಸಲ್ಲಿಸಿದ್ದಾರೆ.    

ಪಿಎಸ್ಸೈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು 34 ಆರೋಪಿಗಳನ್ನು ಬಂಧಿಸಿ, ಎಫ್‍ಐಆರ್ ದಾಖಲಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ತನಿಖಾಧಿಕಾರಿ ಡಿವೈಎಸ್‍ಪಿ ಪ್ರಕಾಶ್ ರಾಠೋಡ್ ನೇತೃತ್ವದಲ್ಲಿ ಕೋರ್ಟ್‍ಗೆ ಬಿಗಿಭದ್ರತೆಯಲ್ಲಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.

ಅಕ್ರಮದ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ವಿರುದ್ಧ ಎ.10ರಂದು ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಬಳಿಕ ರಾಜ್ಯ ಸರಕಾರ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿತ್ತು. ಸಿಐಡಿಗೆ ಪ್ರಕರಣ ಹಸ್ತಾಂತರವಾದ ಬೆನ್ನಲ್ಲೇ ಎ.16ರಂದು ಸಿಐಡಿ, ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿಯರಾದ ಸುಮಾ, ಸಿದ್ದಮ್ಮ ಮತ್ತು ಸಾವಿತ್ರಿಯನ್ನು ಬಂಧಿಸಿತ್ತು.

ಮೂವರು ಮೇಲ್ವಿಚಾರಕಿಯರನ್ನು ಬಂಧಿಸಿದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ತನಿಖಾಧಿಕಾರಿಗಳು, ಅಕ್ರಮಕ್ಕೆ ಸಂಬಂಧಿಸಿದಂತೆ ಶಾಲೆಯ ಒಡತಿ ದಿವ್ಯಾ ಹಾಗರಗಿ, ಪತಿ ರಾಜೇಶ್ ಹಾಗರಗಿ, ಮುಖ್ಯ ಶಿಕ್ಷಕ ಕಾಶಿನಾಥ್, ಶಿಕ್ಷಕಿ ಅರ್ಚನಾ, ಕಿಂಗ್‍ಪಿನ್‍ಗಳಾದ ಮಂಜುನಾಥ ಮೇಳಕುಂದಿ, ಆರ್.ಡಿ.ಪಾಟೀಲ್, ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್, ಕೆಎಸ್‍ಆರ್‍ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್ ಬಿರಾದಾರ್, ಡಿವೈಎಸ್‍ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ ಮೇತ್ರೆ ಸೇರಿ 34 ಆರೋಪಿಗಳನ್ನು ಬಂಧಿಸಿ, ಎಫ್‍ಐಆರ್ ದಾಖಲಿಸಿ ವಿಚಾರಣೆ ನಡೆಸಿ  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News