ರೋಚಕ ಸುದ್ದಿಗಳಿಂದ ಸಮಾಜಕ್ಕೆ ಉಪಯೋಗವಿಲ್ಲ: ಸಿದ್ದರಾಮಯ್ಯ

Update: 2022-07-06 17:15 GMT

ಮೈಸೂರು,ಜು.6:  ಕೆಲವು ಪತ್ರಿಕೆ ಮತ್ತು ಸುದ್ದಿ ವಾಹಿನಿಗಳಲ್ಲಿ ರೋಚಕ ಸುದ್ದಿಗೆ ಆದ್ಯತೆ ನೀಡಲಾಗುತ್ತಿದೆ. ರೋಚಕ ಸುದ್ದಿಯಿಂದ ದೇಶಕ್ಕೆ ಸಮಾಜಕ್ಕೆ ಉಪಯೋಗವೇನು? ಹಾಗಾಗಿ ಮಾಧ್ಯಮಗಳು ಜನರ ದನಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಬುಧವಾರ ನಡೆದ ಆಂದೋಲನ ದಿನಪತ್ರಿಕೆಯ 50ನೇ ಸಾರ್ಥಕ ಪಯಣ  ಸಂಭ್ರಮಾಚರಣೆಯಲ್ಲಿ ರಾಜಶೇಖರ ಕೋಟಿ  ಅವರ 'ಇದ್ದದ್ದು ಇದ್ಹಾಂಗ' ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಗಂಡ-ಹೆಂಡತಿ ಜಗಳ ತೀರಾ ವೈಯಕ್ತಿಕವಾದದ್ದು. ಅದನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ತೋರಿಸಿದರೆ ಪ್ರಯೋಜನವಿದೆಯೇ? ನಿರಂತರವಾಗಿ ಮೌಢ್ಯ ಪ್ರಸಾರದಿಂದಲೂ ಪ್ರಯೋಜನವಿಲ್ಲ. ಅವುಗಳು ಬರೀ ಸುಳ್ಳಿನಿಂದ ಕೂಡಿರುತ್ತವೆ ಎಂದು ನುಡಿದರು.

'ಮುಖ್ಯಮಂತ್ರಿಯಾಗಿದ್ದಾಗ ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದನ್ನು ಭಾರೀ ಸುದ್ದಿ ಮಾಡಲಾಯಿತು. ಸಿಎಂ ಸ್ಥಾನ ಹೋಗಲಿದೆ ಎಂದು ಜ್ಯೋತಿಷಿಗಳು ನುಡಿದರು. ಏನೂ ಆಗಲಿಲ್ಲ. ಅಲ್ಲದೇ ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆಂದರು. 12 ಬಾರಿ ಹೋದೆ. ಏನೂ ಆಗಲಿಲ್ಲ' ಎಂದು ಹೇಳಿದರು.

ಯಾವುದೇ ಪತ್ರಿಕೆ, ಸುದ್ದಿ ವಾಹಿನಿ ಸಮಾಜದಲ್ಲಿ ಅವಕಾಶ ವಂಚಿತ ಜನರು, ದೌರ್ಜನ್ಯಕ್ಕೆ ಒಳಗಾದವರು, ಶೋಷಿತರ ಪರವಾಗಿ ದನಿಯಾಗಿ ಕೆಲಸ ಮಾಡಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳು ಹೋರಾಟದ ಭಾಗವಾಗಿದ್ದವು ಎಂದು ಸ್ಮರಿಸಿದರು.

ತುರ್ತುಪರಿಸ್ಥಿತಿ, ರೈತ, ದಲಿತ ಚಳವಳಿ, ಗೋಕಾಕ ಚಳವಳಿ ಕಾಲದಲ್ಲಿ ಪ್ರಾರಂಭವಾದ ಆಂದೋಲನ ದಿನಪತ್ರಿಕೆ ವಸ್ತುನಿಷ್ಠವಾಗಿ ಸತ್ಯದ ಪರವಾಗಿ ನಡೆದಿದೆ. ಸಂಪಾದಕರಾದ ರಾಜಶೇಖರ ಕೋಟಿ ಅವರು ಸ್ನೇಹಜೀವಿ. ಹಠವಾದಿ, ಛಲವಾದಿಯಾಗಿದ್ದರು. ಎಡಪಂಥೀಯರಾದರು ಪತ್ರಿಕಾ ವೃತ್ತಿಗೆ ನಿಷ್ಠರಾಗಿದ್ದರು ಎಂದು ಹೇಳಿದರು.

ಹಿರಿಯ ಪತ್ರಕರ್ತ ಪಿ.ಸಾಯಿನಾಥ್‌ ಮಾತನಾಡಿ, ಅಭಿಪ್ರಾಯ ವ್ಯಕ್ತಿಪಡಿಸಲು ಯಾವುದೇ ತೊಂದರೆ ಇಲ್ಲ. ತಮ್ಮ ಅಭಿಪ್ರಾಯ ಹೊರ ಬಂದ ಬಳಿಕ ತೊಂದರೆ ಎದುರಿಸಬೇಕಾಗಿದೆ. ಪತ್ರಕರ್ತರಾದ ತಿಸ್ತಾ ಸೆಟಲ್ವಾಡ್‌, ಜುಬೇರ್‌ ಬಂಧನವಾಗಿದೆ. ಯಾವ ಪತ್ರಿಕೆಗಳು ಮುಖ್ಯವರದಿಯಾಗಿ ಪ್ರಕಟಿಸಿವೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್‌ಕುಮಾರ್‌, ನಿರ್ಮಲಾ ಕೋಟಿ, ಹಿರಿಯ ಹೋರಾಟಗಾರ ಪ.ಮಲ್ಲೇಶ್‌ ಭಾಗವಹಿಸಿದ್ದರು.

ಅಗ್ನಿಪಥ್‌ ಯುವಕರಿಗೆ ಉದ್ಯೋಗ ಕೊಡಲು ತಂದ ಯೋಜನೆಯಲ್ಲ. ಬದಲಿಗೆ ನಿವೃತ್ತಿ ಯೋಜನೆಯಾಗಿದೆ. ಅಗ್ನಿವೀರರು ಕಾರ್ಪೋರೇಟ್‌ ಕಂಪನಿ ಮತ್ತು ರಾಜಕೀಯ ಪಕ್ಷಗಳ ಕಚೇರಿ ಮುಂದೆ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡಬೇಕಾಗುತ್ತದೆ.

-ಪಿ.ಸಾಯಿನಾಥ್‌, ಹಿರಿಯ ಪತ್ರಕರ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News