ಬಂಟ್ವಾಳದ ಮುಕ್ಕುಡದಲ್ಲಿ ಶೆಡ್ ಮೇಲೆ ಗುಡ್ಡ ಕುಸಿತ; ಗಾಯಾಳು ಮೃತ್ಯು

Update: 2022-07-06 18:38 GMT

ಬಂಟ್ವಾಳ: ಕಾರ್ಮಿಕರು ಉಳಿದುಕೊಂಡ ಶೆಡ್ ಮೇಲೆ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿಗೆ ಸಿಲುಕಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮೃತರನ್ನು ಪಾಲಕ್ಕಾಡು ನಿವಾಸಿ ವಿಜು (46) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಂತೋಷ್ ಆಲಫುಝ (46), ಕೊಟ್ಟಾಯಂ ನಿವಾಸಿ ಬಾಬು (46) ಹಾಗೂ ಕಣ್ಣೂರು ನಿವಾಸಿ ಜಾನ್ (44) ಎಂದು ಗುರುತಿಸಲಾಗಿದೆ. ಈ ಪೈಕಿ ಸಂತೋಷ್ ಆಲಫುಝ ಅವರ ಸ್ಥಿತಿ ಗಂಭೀರವಾಗಿದೆನ್ನಲಾಗಿದೆ. ಗಾಯಾಳುಗಳನ್ನು ಮಂಗಳೂರು ಹಾಗೂ ಬಂಟ್ವಾಳದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ಹೆನ್ರಿ ಕಾರ್ಲೊ ಎಂಬವರ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಐವರು ಕಾರ್ಮಿಕರು ವಾಸವಿದ್ದ ಶೆಡ್ ಮೇಲೆ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ವೇಳೆ ಓರ್ವ ಮನೆಯ ಹೊರಗಿದ್ದು, ನಾಲ್ವರು ಮಣ್ಣಿನಡಿ ಸಿಲುಕಿದ್ದರು.

ಜೆಸಿಬಿಯಲ್ಲಿ ಮಣ್ಣು ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಿ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಮೃತಪಟ್ಟಿದ್ದಾರೆ. 

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ದ.ಕ. ಎಸ್ಪಿ ಹೃಷಿಕೇಶ್ ಸೋನಾವಣೆ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ತಹಶೀಲ್ದಾರ್ ಸ್ಮಿತಾರಾಮು, ಪಿಡಿಒ ವಿದ್ಯಾಶಿವಾನಂದ, ಪೋಲಿಸ್ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್, ಎಸ್ಸೈ ಹರೀಶ್, ಕಂದಾಯ ನಿರೀಕ್ಷಕ ಸಂತೋಷ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News