‘ಬಿ’ ಖಾತಾ ನಿವೇಶನದಾರರಿಗೆ ‘ಎ’ ಖಾತಾ ನೀಡಲು ನಿರ್ಧಾರ: ಸಚಿವ ಬಿ.ಎ.ಬಸವರಾಜ

Update: 2022-07-06 18:49 GMT

ಬೆಂಗಳೂರು, ಜು.6: ರಾಜ್ಯಾದ್ಯಂತ ‘ಬಿ’ ಖಾತಾ ಹೊಂದಿರುವ ಲಕ್ಷಾಂತರ ನಿವೇಶನದಾರರಿಗೆ ಇನ್ನೆರಡು ತಿಂಗಳಲ್ಲಿ ‘ಎ’ ಖಾತಾ ನೀಡಲು ಸರಕಾರ ನಿರ್ಧರಿಸಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ತಿಳಿಸಿದರು. 

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎ’ ಖಾತಾ ನೀಡಬೇಕೆಂದು ನಿವೇಶನದಾರರು ಬಹು ದಿನಗಳಿಂದ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ‘ಬಿ’ ಖಾತೆಯನ್ನು ಹೊಂದಿರುವವರಿಗೆ ‘ಎ’ ಖಾತೆ ಮಂಜೂರು ಮಾಡುವಂತೆ ಸೂಚಿಸಿದ್ದಾರೆ ಎಂದರು.

ನಿವೇಶನದಾರರಿಗೆ ‘ಎ’ ಖಾತೆ ಸಿಗುವುದರಿಂದ ಅವರು ತಮ್ಮ ನಿವೇಶನ, ಮನೆ ಅಥವಾ ಕಟ್ಟಡವನ್ನು ಅಡಮಾನವಿಟ್ಟು ಬ್ಯಾಂಕುಗಳಿಂದ ಸಾಲ ಪಡೆಯುವುದು ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ‘ಎ’ ಖಾತಾ ವಿತರಿಸುವುದರಿಂದ ನಗರ ಸ್ಥಳೀಯ ಸಂಸ್ಥೆಗಳಿಗೂ ನೂರಾರು ಕೋಟಿ ರೂ.ಗಳ ಆದಾಯ ಬರಲಿದೆ ಎಂದು ಬಸವರಾಜ ಹೇಳಿದರು.

ರಾಜ್ಯದ ಹತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ‘ಬಿ’ ಖಾತೆದಾರರಿದ್ದಾರೆ. ಇನ್ನು ನಗರಸಭೆ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಿದೆ ಎಂದು ಬಸವರಾಜ ತಿಳಿಸಿದರು.

ಸಿಎ ನಿವೇಶನಗಳ ಒತ್ತುವರಿ ತೆರವು: ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಬಡಾವಣೆಗಳಲ್ಲಿ ನಾಗರಿಕರ ಬಳಕೆಗಾಗಿ ಮೀಸಲಿಡುವಂತಹ ಸಿ.ಎ.ನಿವೇಶಗಳು ಒತ್ತುವರಿಯಾಗಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಿ.ಎ. ನಿವೇಶಗಳ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಮಾಹಿತಿ ಸಿಕ್ಕ ನಂತರ ಎಲ್ಲೆಲ್ಲಿ ಒತ್ತುವರಿಯಾಗಿದೆಯೋ ಅವುಗಳನ್ನೆಲ್ಲ ತೆರವುಗೊಳಿಸಲಾಗುವುದು. ಆನಂತರ, ಅವುಗಳನ್ನು ಯಾವ ರೀತಿ ಬಳಸಬೇಕು ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News