ಚಿಕ್ಕಮಗಳೂರು | ಮುಂದುವರಿದ ಭಾರೀ ಮಳೆ: 5 ದಿನ ಕಳೆದರೂ ಪತ್ತೆಯಾಗದ ಬಾಲಕಿ

Update: 2022-07-08 13:00 GMT

ಚಿಕ್ಕಮಗಳೂರು, ಜು.8: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಶನಿವಾರವೂ ಮಳೆ ಮುಂದುವರಿದಿದ್ದು, ಕಳೆದ ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದು ಕೊಚ್ಚಿ ಹೋದ ಬಾಲಕಿಯ ಸುಳಿವು ಇದುವರೆಗೂ ಪತ್ತೆಯಾಗಿಲ್ಲ.

ಬಾಲಕಿಯ ಶೋಧಕ್ಕಾಗಿ ನಿರಂತರ ಶೋಧ ಕಾರ್ಯ ಮುಂದುವರಿದಿರುವುದು ಒಂದೆಡೆಯಾದರೇ, ಮತ್ತೊಂದೆಡೆ ಬಾಲಕಿಯನ್ನು ಕಳೆದುಕೊಂಡ ಕುಟುಂಬಸ್ಥರು ತಮ್ಮ ಮನೆ ಮಗಳು ಬದುಕಿ ಬರಲಿದ್ದಾರೆಂದು ಪ್ರತಿದಿನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೂ ಜನಪ್ರತಿನಿಧಿಗಳೆನಿಸಿಕೊಂಡವರು ಬಾಲಕಿ ಕುಟುಂಬಸ್ಥರ ಅಳಲಿಗೆ ಸ್ಪಂದಿಸದಿರುವುದರ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಸುಪ್ರೀತಾ ಎಂಬ 7 ವರ್ಷದ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗುವುದಕ್ಕೂ ಮುನ್ನ ವಿಪರೀತ ಜ್ವರದ ಕಾರಣದಿಂದ ಸುಮಾರು 2 ವಾರಗಳಿಂದ ಶಾಲೆಯತ್ತ ಮುಖ ಮಾಡಿರಲಿಲ್ಲ. ಕಳೆದ ರವಿವಾರ ಬಾಲಕಿಗೆ ಜ್ವರ ಕಡಿಮೆಯಾಗಿದ್ದು, ಮಗಳ ಒತ್ತಾಯದ ಮೇರೆಗೆ ತಾಯಿ ಗೌರಿ ಒಲ್ಲದ ಮನಸಿನಿಂದಲೇ ಮಗಳನ್ನು ಶಾಲೆಗೆ ಕಳುಹಿಸಿದ್ದರು. ಅಣ್ಣನೊಂದಿಗೆ ಶಾಲೆಗೆ ತೆರಳಿದ್ದ ಬಾಲಕಿ ಸಂಜೆ ವೇಳೆ ಅಣ್ಣನೊಂದಿಗೆ ಮನೆಯತ್ತ ಹೆಜ್ಜೆ ಹಾಕಿದ್ದಳು. ಧಾರಾಕಾರ ಮಳೆ ಪರಿಣಾಮ ಮನೆಯ ದಾರಿ ಮಧ್ಯೆ ತುಂಬಿ ಹರಿಯುತ್ತಿದ್ದ ಸಣ್ಣ ಹಳ್ಳದಲ್ಲಿ ಬಾಲಕಿ ಕೆಸರಾಗಿದ್ದ ಕಾಲು ತೊಳೆಯಲು ಹೋಗಿದ್ದಳು, ಈ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.

ಶಾಲಾ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋಗಿ ಶುಕ್ರವಾರಕ್ಕೆ 5 ದಿನ ಕಳೆದಿದ್ದು, ಇದುವರೆಗೂ ಆಕೆಯ ಬಗ್ಗೆ ಸಣ್ಣ ಸುಳಿವೂ ಸಿಕ್ಕಿಲ್ಲ. ಕಳೆದ 5 ದಿನಗಳಿಂದ ಬಾಲಕಿಗಾಗಿ ಅಗ್ನಿ ಶಾಮಕದಳ, ಪೊಲೀಸರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವಿಪತ್ತು ನಿರ್ವಹಣೆ ತಂಡ, ಎನ್‍ಡಿಆರ್ ಎಫ್ ಸಿಬ್ಬಂದಿ, ಮೂಡಿಗೆರೆಯ ಸಾಮಾಜಿಕ ಸಕ್ರೀಯ ಸೇವಾ ಸಂಸ್ಥೆ ಹಾಗೂ ಸ್ಥಳೀಯರು ಸುರಿಯುವ ಮಳೆ, ಜಿಗಣೆಗಳ ಕಾಟಕ್ಕೂ ಅಂಜದೇ ನಿರಂತರವಾಗಿ ಹುಡುಕಾಟ ನಡೆಸಿದ್ದರೂ ಬಾಲಕಿಯ ಸುಳಿವು ಪತ್ತೆಯಾಗಿಲ್ಲ. ಹೊಸಪೇಟೆ ಭಾಗದಲ್ಲಿ ನಿರಂತರ ಮಳೆಯಿಂದಾಗಿ ಶೋಧ ಕಾರ್ಯ ಸವಾಲಾಗಿದ್ದು, ಬಾಲಕಿಯ ಶೋಧ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿ, ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಹೈರಾಣಾಗಿದ್ದಾರೆ.

ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಶಾಸಕ ಸಿ.ಟಿ.ರವಿ ಕಳೆದೊಂದು ವಾರದಿಂದ ಚಿಕ್ಕಮಗಳೂರು ನಗರದಲ್ಲಿದ್ದರೂ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ, ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳುವಂತಹ ಔಧಾರ್ಯವನ್ನೂ ಅವರು ತೋರಿಲ್ಲ ಎಂದು ಸಿ.ಟಿ.ರವಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳ ಈ ನಡವಳಿಕೆ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ತೋರುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News