ಅಡ್ಡ ಮತದಾನ: ಕೆ.ಶ್ರೀನಿವಾಸ್‍ಗೌಡ, ಎಸ್.ಆರ್.ಶ್ರೀನಿವಾಸ್ ಅನರ್ಹಗೊಳಿಸಲು ಸ್ಪೀಕರ್ ಗೆ ಜೆಡಿಎಸ್ ಮನವಿ

Update: 2022-07-08 13:08 GMT

ಬೆಂಗಳೂರು, ಜು. 8: ‘ಇತ್ತೀಚೆಗೆ ನಡೆದ ರಾಜ್ಯಸಭೆಯ ಚುನಾವಣೆಯಲ್ಲಿ ‘ಅಡ್ಡ ಮತದಾನ' ಮಾಡಿದ ಆರೋಪಕ್ಕೆ ಸಿಲುಕಿರುವ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಮತ್ತು ಗುಬ್ಬಿ ಕ್ಷೇತ್ರದ ಎಸ್.ಆರ್. ಶ್ರೀನಿವಾಸ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು' ಎಂದು ಕೋರಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜೆಡಿಎಸ್ ಮನವಿ ಮಾಡಿದೆ.

ಶುಕ್ರವಾರ ಜೆಡಿಎಸ್ ಮುಖ್ಯ ಸಚೇತಕರೂ ಆಗಿರುವ ಶಾಸಕ ವೆಂಕಟರಾವ್ ನಾಡಗೌಡ, ವಿಧಾನಸಭೆಯ ಸ್ಪೀಕರ್ ಅವರಿಗೆ ದೂರು ಸಲ್ಲಿಸಿದ್ದು, ‘ಜೆಡಿಎಸ್‍ನ ಮೇಲ್ಕಂಡ ಇಬ್ಬರೂ ಶಾಸಕರು ಪಕ್ಷದ ವಿರುದ್ಧ ಹೇಳಿಕೆ ನೀಡಿರುವುದು, ಜೂನ್ 10ಕ್ಕೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬೇರೆಪಕ್ಷಗಳ ಅಭ್ಯರ್ಥಿಗಳಿಗೆ ಮತ ಚಲಾಯಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಿದ್ದು, ಇಬ್ಬರನ್ನೂ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು' ಎಂದು ಕೋರಿದ್ದಾರೆ.

ಸ್ಪೀಕರ್‍ಗೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಡಗೌಡ, ‘ನಮ್ಮ ಪಕ್ಷದ ಶಾಸಕರಾದ ಕೆ.ಶ್ರೀನಿವಾಸಗೌಡ ಹಾಗೂ ಎಸ್.ಆರ್.ಶ್ರೀನಿವಾಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಪಕ್ಷದ ವಿರುದ್ಧವೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇಬ್ಬರು ಶಾಸಕರು ಕಾಂಗ್ರೆಸ್ ಪಕ್ಷದ ಜತೆ ಗುರುತಿಸಿಕೊಂಡಿದ್ದು, ಹೀಗಾಗಿ ಅವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರು ಸಲ್ಲಿಸಿದ್ದೇವೆ' ಎಂದು ಸ್ಪಷ್ಟಪಡಿಸಿದರು.

‘ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ. ಇಂತಹ ದೂರುಗಳಿಂದ ಏನೂ ಪ್ರಯೋಜನ ಆಗುವುದಿಲ್ಲ ಎಂದು ನಮ್ಮ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ ಅಷ್ಟೇ. ಹಾಗೆಂದು ಪಕ್ಷದಿಂದ ಏನೂ ಕ್ರಮ ತೆಗೆದುಕೊಂಡಿಲ್ಲ ಎಂಬ ಸಂದೇಶ ರವಾನೆ ಸರಿಯಲ್ಲ. ಹೀಗಾಗಿ ಇಬ್ಬರೂ ಶಾಸಕರ ವಿರುದ್ಧ ದೂರು ನೀಡಿದ್ದೇವೆ' ಎಂದು ಅವರು ವಿವರಣೆ ನೀಡಿದರು.

‘ಈಗಾಗಲೇ ಪಕ್ಷದ ಶಿಸ್ತು ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಶಾಸಕರಾದ ಕೆ.ಶ್ರೀನಿವಾಸ ಗೌಡ ಹಾಗೂ ಎಸ್.ಆರ್.ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಸ್ಪೀಕರ್ ಅವರು ನಮ್ಮ ದೂರನ್ನು ಸ್ಪೀಕರಿಸಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ'

-ವೆಂಕಟರಾವ್ ನಾಡಗೌಡ ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News