ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ಹುಟ್ಟು ಹಾಕುವ ಹುನ್ನಾರ ನಡೆಯುತ್ತಿದೆ: ಸಾಣೇಹಳ್ಳಿ ಸ್ವಾಮೀಜಿ

Update: 2022-07-08 13:42 GMT

ಚಿಕ್ಕಮಗಳೂರು, ಜು.8: ನಾಡಿನಲ್ಲಿ ಶಾಂತಿ ಸೌಹಾರ್ದತೆಗೆ ಇದುವರೆಗೂ ಆದ್ಯತೆ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ಉಂಟು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಚಿತ್ರದುರ್ಗ ಜಿಲ್ಲೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ತಾಲೂಕಿನ ಎಸ್.ಕೊಪ್ಪಲು ಗ್ರಾಮದಿಂದ ನಿಡಘಟ್ಟ ಗ್ರಾಮದ ಗಾಂಧಿಗುಂಡಿವರೆಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆದ ಪಠ್ಯ ಪರಿಷ್ಕರಣೆಯನ್ನು ವಿರೋಧಿಸಿ ಕ್ಯಾತನಬೀಡು ಪ್ರತಿಷ್ಠಾನ, ಜನದನಿ ಸಂಘಟನೆ ಹಾಗೂ ಸಂಗಮ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸಾಮರಸ್ಯದ ನಡಿಗೆ, ಜನಸಾಮಾನ್ಯರೆಡೆಗೆ ಜನಜಾಗೃತಿ ಪಾದಯಾತ್ರೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನನ್ನು ಮನುಷ್ಯನಂತೆ ಕಾಣುತ್ತಿಲ್ಲ, ಹೋರಾಟಗಾರರನ್ನು ಅನುಮಾನದಿಂದ ಕಾಣುವ ಸ್ಥಿತಿ ಇದೆ. ಇದೆಲ್ಲಕ್ಕೂ ಎದೆಯೊಡ್ಡಿ ಬದ್ಧತೆಯಿಂದ ಹೋರಾಟ ಮಾಡುವ ಅನಿವಾರ್ಯತೆ ಇದೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಕೊಳಕು ತುಂಬಿಕೊಂಡಿದ್ದು, ಹೋರಾಟದ ಮೂಲಕ ಅಂಟಿರುವ ಕೊಳಕು ತೆಗೆಯಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ತಿಳಿಸಿದರು. 

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆದ ಪಠ್ಯ ಪರಿಷ್ಕರಣೆ ಸಾಕಷ್ಟು ಗೊಂದಲಗಳಿಗೆ ಈಡಾಗಿದೆ. ಇದರ ವಿರುದ್ಧ ಅನೇಕರು ಧ್ವನಿ ಎತ್ತಿದ್ದಾರೆ. ವಿರೋಧ ವ್ಯಕ್ತವಾದ ಬಳಿಕ ಸರಕಾರ ಪರಿಷ್ಕರಣೆ ಮಾಡಲು ಒಪ್ಪಿಕೊಂಡಿದೆ. ಪಠ್ಯದಲ್ಲಿರುವ ಅಷ್ಟೂ ತಪ್ಪುಗಳೂ ಪರಿಷ್ಕರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಮಕ್ಕಳ ಮನಸ್ಸು ಹಸಿಗೋಡೆ ಇದ್ದಂತೆ, ಏನು ಬೋಧನೆ ಮಾಡುತ್ತೇವೆಯೋ ಅದು ಅವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಸರಿಯಾದ ಇತಿಹಾಸ ಮತ್ತು ಚಾರಿತ್ರ್ಯವನ್ನು ಅವರಿಗೆ ಹೇಳಿಕೊಡಬೇಕು. ವಸ್ತುನಿಷ್ಠ ಮತ್ತು ಸಮಾಜಮುಖಿಯಾಗಿರಬೇಕು. ಈ ಬಗ್ಗೆ ಸರಕಾರ ಚಿಂತನೆ ಮಾಡಬೇಕು. ಈ ಹೋರಾಟ ಯಾವುದೇ ಪಕ್ಷ, ವ್ಯಕ್ತಿಯ ವಿರುದ್ಧವಲ್ಲ, ಈ ನಾಡಿನ ಒಳತಿಗಾಗಿ, ಅನ್ಯಾಯದ ವಿರುದ್ಧ ಸರಕಾರ  ಎಚ್ಚೆತ್ತುಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News