×
Ad

ಕಡಲ್ಕೊರೆತ; ತುರ್ತು ಕಾಮಗಾರಿ ಕೈಗೊಳ್ಳಲು ಸಿಎಂ ಬೊಮ್ಮಾಯಿ ಸೂಚನೆ

Update: 2022-07-08 20:08 IST

ಬೆಂಗಳೂರು, ಜು.8: ರಾಜ್ಯದ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಕಡಲ ಕೊರೆತ ಆದಲ್ಲಿ ತುರ್ತು ಕಾಮಗಾರಿ ಕೂಡಲೇ ಕೈಗೊಂಡು ಹೆಚ್ಚಿನ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು 13 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಳೊಂದಿಗೆ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ವೀಡಿಯೊ ಕಾನ್ಫರೆನ್ಸ್ ನಡೆಸಿದ ಅವರು, ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್ ತಂಡಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳವಂತೆ ಸೂಚಿಸಿದರು.

ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ರಚಿಸಿ, ನೇರ ಸಂಪರ್ಕ ಹೊಂದಿರಬೇಕು. ನಿಯಂತ್ರಣ ಕೊಠಡಿ ಸ್ಥಾಪಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪೊಲೀಸರು ಸೇವೆಗೆ ದಿನದ 24 ಗಂಟೆಯೂ ಲಭ್ಯರಿರಬೇಕು. ಕಂದಾಯ, ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ಇತರ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದರು.

ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಒಟ್ಟು 735.59 ಕೋಟಿ ರೂ.ಲಭ್ಯವಿದೆ. ಮುಂದಿನ ಮೂರು, ನಾಲ್ಕು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಮಳೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿಯನ್ನು ಆದ್ಯತೆ ಮೇರೆಗೆ ಕೈಗೊಂಡು ಸಂಚಾರ ಸಂಪರ್ಕ ಸಮರ್ಪಕವಾಗಿರುವಂತೆ ಎಚ್ಚರ ವಹಿಸಬೇಕು. ಭೂಕುಸಿತವಾದಲ್ಲಿ ಕೂಡಲೇ ರಸ್ತೆ ತೆರವುಗೊಳಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಮನೆ ಹಾನಿಯಾದಲ್ಲಿ ಮೊದಲು 10 ಸಾವಿರ ರೂ.ತುರ್ತು ಪರಿಹಾರ ಕೂಡಲೇ ಕೊಡಿ. ನಂತರ ಹಾನಿ ಪ್ರಮಾಣವನ್ನು ನಿಯಮಾನುಸಾರ ಅಂದಾಜು ಮಾಡಿ, ವರ್ಗೀಕರಿಸಿ, ರಾಜೀವ್ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಳೆಹಾನಿಯನ್ನು ಮಳೆ ನಿಂತ ಕೂಡಲೇ ಸಮೀಕ್ಷೆ ಮಾಡಿ ವರದಿ ಸಲ್ಲಿಸಬೇಕು. ಜೀವ ಹಾನಿ, ಜಾನುವಾರು ಜೀವ ಹಾನಿ ಸಂಭವಿಸಿದಾಗ ತಕ್ಷಣ ಪರಿಹಾರ ವಿತರಿಸಬೇಕು. ವಿದ್ಯುತ್ ಕಂಬಗಳು ಬಿದ್ದು ಹೋದಲ್ಲಿ ಕೂಡಲೇ ಸರಿಪಡಿಸಿ, ವಿದ್ಯುತ್ ಸರಬರಾಜಿಗೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು, ಪರಿಹಾರ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಿ. ಮಾರ್ಗಸೂಚಿಯನ್ವಯ ಪರಿಹಾರ ನೀಡಿ. ತೊಡಕುಗಳಿದ್ದಾಗ, ವಿಶೇಷ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ವಿಭಾಗದ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಕೆಲಸ ನಿರ್ವಹಿಸಿ ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಎಸ್.ಟಿ. ಸೋಮಶೇಖರ್, ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಭಿವೃದ್ಧಿ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೆÇಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಳೆ ಹಾನಿಯ ಪ್ರಮಾಣ(ಜೂ.1ರಿಂದ ಈವರೆಗೆ)

ಪ್ರವಾಹಪೀಡಿತ ಜಿಲ್ಲೆಗಳ ಸಂಖ್ಯೆ-13

ತಾಲೂಕುಗಳು-17

ಗ್ರಾಮಗಳು-37

ಬಾಧಿತ ಜನಸಂಖ್ಯೆ-495

ರಕ್ಷಿಸಲಾದ ಜನರ ಸಂಖ್ಯೆ-90

ತೆರೆಯಲಾಗಿರುವ ಕಾಳಜಿ ಕೇಂದ್ರಗಳು-4

ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರ ಸಂಖ್ಯೆ-90

ಮಾನವ ಜೀವ ಹಾನಿ-12

ಜಾನುವಾರು ಜೀವಹಾನಿ-65

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News